ಚಿಕ್ಕಮಗಳೂರು: ಜಮೀನಿಗೆ ಹೋಗುವ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ(Mudigere) ತಾಲೂಕಿನ ಚಿಕ್ಕಹಳ್ಳ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಪ್ರವೀಣ್ (40) ಎಂದು ಗುರುತಿಸಲಾಗಿದೆ. ಮೃತ ಪ್ರವೀಣ್ ಕುಟುಂಬಕ್ಕೂ ವಿರೋಧಿ ಕುಟುಂಬಕ್ಕೂ ಕಳೆದ ಕೆಲ ವರ್ಷಗಳಿಂದ ವಿವಾದ ನಡೆಯುತ್ತಲೇ ಇತ್ತು. ರಸ್ತೆ ಗಲಾಟೆ ಕೋರ್ಟ್ ಮೆಟ್ಟಿಲು ಏರಿ, ಕೋರ್ಟ್ ತೀರ್ಮಾನ ಕೂಡ ಪ್ರವೀಣ್ ಪರವಾಗಿ ಬಂದಿತ್ತು ಎಂದು ಪ್ರವೀಣ್ ಕುಟುಂಬ ಮಾಹಿತಿ ನೀಡಿದೆ. ಆದರೂ ವಿವಾದ ನಡೆಯುತ್ತಲೇ ಇತ್ತು. ಅಷ್ಟೇ ಅಲ್ಲದೆ, ಪ್ರವೀಣ್ ವಿರೋಧಿ ಕುಟುಂಬಕ್ಕೆ ಜಮೀನಿಗೆ ಹೋಗಲು ಬೇರೆ ರಸ್ತೆ ಕೂಡ ಇತ್ತು. ಆದರೆ, ಆ ಕುಟುಂಬ ಇದೇ ರಸ್ತೆ ಮೇಲೆ ಹೆಚ್ಚು ಅವಲಂಬಿತವಾಗಿತ್ತು.
ಶುಕ್ರವಾರ ಪ್ರವೀಣ್ ತನ್ನ ಜಮೀನಿಗೆ ಹೋಗುವಾಗ ವಿವಾದಿತ ರಸ್ತೆಯಲ್ಲಿ ವಿರೋಧಿ ಕುಟುಂಬದವರು ಕೆಲಸ ಮಾಡುತ್ತಿದ್ದರು. ಅದನ್ನು ಪ್ರಶ್ನಿಸಲು ಬಂದ ಪ್ರವೀಣ್ ಮೇಲೆ ಸುಮಾರು ಎಂಟಕ್ಕೂ ಹೆಚ್ಚು ಜನ ಕತ್ತಿ ಮತ್ತು ಹಾರೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು ಎಂದು ತಿಳಿದುಬಂದಿದೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಪ್ರವೀಣ್ನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.
ವಿರೋಧಿಗಳು ಮೃತ ಪ್ರವೀಣ್ ತಂದೆ ಲಕ್ಷ್ಮಣ್ ಮೇಲೂ ಹಲ್ಲೆ ನಡೆಸಿದ್ದಾರೆ. ಇದರಿಂದ ಅವರ ಕೈ ಮುರಿದಿದೆ. ಪ್ರವೀಣ್ ತಾಯಿ ಮೇಲೂ ಹಲ್ಲೆ ನಡೆಸಿದ್ದು, ಈ ಹಿಂದೆ ಹಲವು ಬಾರಿ ಇದೇ ರಸ್ತೆ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಗಲಾಟೆ (Uproar) ನಡೆದಿತ್ತು. ಈ ಕುರಿತು ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.