ನಾಗಪುರ: ಹಿಂದುತ್ವವು ಎಲ್ಲಾ ವರ್ಗಗಳನ್ನೂ ಗೌರವಿಸುತ್ತದೆ. ಪ್ರಸ್ತುತ ನಡೆಯುತ್ತಿರುವ ಹಮಾಸ್- ಇಸ್ರೇಲ್ ಯುದ್ಧಕ್ಕೆ ಕಾರಣವಾದ ಸಮಸ್ಯೆಗಳಂತಹ ಕಲಹಗಳನ್ನು ಭಾರತ ಎಂದಿಗೂ ಕಂಡಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ನಾಗಪುರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ಹಿಂದೂಗಳ ದೇಶವಾಗಿರುವ ಕಾರಣ ಇಂತಹ ಸಂಘರ್ಷಗಳು ನಡೆಯುತ್ತಿಲ್ಲ ಎಂದರು.
“ಈ ದೇಶದಲ್ಲಿ ಎಲ್ಲಾ ವರ್ಗಗಳು ಮತ್ತು ನಂಬಿಕೆಗಳನ್ನು ಗೌರವಿಸುವ ಧರ್ಮವಿದೆ. ಆ ಧರ್ಮ ಹಿಂದೂಯಿಸಂ. ಇದು ಹಿಂದೂಗಳ ದೇಶ. ಅದರ ಅರ್ಥ ನಾವು ಇತರೆ ಧರ್ಮಗಳನ್ನು ತಿರಸ್ಕರಿಸುತ್ತೇವೆ ಎಂದಲ್ಲ. ಒಮ್ಮೆ ನೀವು ಹಿಂದೂ ಎಂದರೆ, ಮುಸ್ಲಿಮರನ್ನು ಕೂಡ ರಕ್ಷಿಸಲಾಗುತ್ತಿದೆ ಎಂದು ನೀವು ಹೇಳುವ ಅಗತ್ಯವಿಲ್ಲ. ಹಿಂದೂಗಳು ಮಾತ್ರವೇ ಇದನ್ನು ಮಾಡಬಲ್ಲರು. ಭಾರತ ಮಾತ್ರವೇ ಇದನ್ನು ಮಾಡುತ್ತದೆ. ಇತರರು ಇದನ್ನು ಮಾಡಿಲ್ಲ” ಎಂದು ಭಾಗವತ್ ಹೇಳಿದರು.
“ಎಲ್ಲಾ ಕಡೆಯೂ ಕಲಹಗಳು ನಡೆಯುತ್ತಿವೆ. ಉಕ್ರೇನ್ ಯುದ್ಧ, ಹಮಾಸ್- ಇಸ್ರೇಲ್ ಯುದ್ಧದ ಬಗ್ಗೆ ನೀವು ಕೇಳಿರುತ್ತೀರಿ. ಅಂತಹ ವಿಷಯಗಳ ಮೇಲೆ ಇಲ್ಲಿ ಎಂದೂ ಯುದ್ಧ ನಡೆದಿರಲಿಲ್ಲ. ಶಿವಾಜಿ ಮಹಾರಾಜ್ ಸಮಯದಲ್ಲಿ ನಡೆದ ದಾಳಿಗಳು ಆ ಮಾದರಿಯದ್ದು. ಆದರೆ ನಾವು ಈ ವಿಷಯದ ಕುರಿತು ಯಾರ ಜತೆಗೂ ಯುದ್ಧಗಳನ್ನು ಮಾಡಲಿಲ್ಲ. ಆ ಕಾರಣದಿಂದ ನಾವು ಹಿಂದೂಗಳಾಗಿದ್ದೇವೆ” ಎಂದು ತಿಳಿಸಿದರು.