ಪೂರ್ವ ಕಾಂಗೋದ ಕಿವು ಸರೋವರದಲ್ಲಿ 278 ಪ್ರಯಾಣಿಕರಿದ್ದ ದೋಣಿ ಮುಳುಗಿದ ಪರಿಣಾಮ ಕನಿಷ್ಠ 78 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಗವರ್ನರ್ ತಿಳಿಸಿದ್ದಾರೆ.
ಈ ದೋಣಿ ದುರಂತದಲ್ಲಿ ಸಾವಿನ ಸಂಖ್ಯೆ ಇನ್ನೂ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ದಕ್ಷಿಣ ಕಿವು ಪ್ರಾಂತ್ಯದ ಗವರ್ನರ್ ಜೀನ್-ಜಾಕ್ವೆಸ್ ಪುರುಸಿ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ಹೇಳಿದೆ.
ಪ್ರಯಾಣಿಕರಿಂದ ತುಂಬಿದ್ದ ದೋಣಿಯು ಕಿಟುಕು ಬಂದರಿನಿಂದ ಕೇವಲ ಮೀಟರ್ (ಗಜ) ದೂರದಲ್ಲಿ ಡಾಕ್ ಮಾಡಲು ಪ್ರಯತ್ನಿಸುತ್ತಿರುವಾಗ ಮುಳುಗಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಇದು ದಕ್ಷಿಣ ಕಿವು ಪ್ರಾಂತ್ಯದ ಮಿನೋವಾದಿಂದ ಉತ್ತರ ಕಿವು ಪ್ರಾಂತ್ಯದ ಗೋಮಾಗೆ ಪ್ರಯಾಣ ಮಾಡುತ್ತಿತ್ತು ಎನ್ನಲಾಗಿದೆ.
ದೋಣಿ ಮುಳುಗಿದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿ ಸುಮಾರು 10 ಮಂದಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ಮುಳುಗಿದ ದೋಣಿಯಿಂದ ಕನಿಷ್ಠ 50 ಶವಗಳನ್ನು ಹೊರತೆಗೆಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
10 ಮಂದಿ ಬದುಕುಳಿದಿದ್ದು, ಅವರೆನ್ನಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರ ರಕ್ಷಣೆ ಹಾಗೂ ಶವಗಳಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಗಳು ಮುಂದುವರೆದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.