ಚೆನ್ನೈ: ಶಫಾಲಿ ವರ್ಮಾ, ಸ್ಮೃತಿ ಮಂಧಾನ ಅವರ ಬ್ಯಾಟಿಂಗ್ ನೆರವು ಹಾಗೂ ಸ್ನೇಹ್ ರಾಣಾ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದ ಟೀಂ ಇಂಡಿಯಾ ಮಹಿಳಾ ತಂಡವು ದಕ್ಷಿಣಾ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದ ವನಿತೆಯರು ಇದೀಗ ಟೆಸ್ಟ್ ಕ್ರಿಕೆಟ್ನಲ್ಲಿ (Test Cricket) ಗೆಲುವು ಸಾಧಿಸಿದ್ದಾರೆ.
ಚೆನ್ನೈನ (Chennai) ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ 37 ರನ್ ಗುರಿ ಪಡೆದ ಭಾರತ ಮಹಿಳಾ ತಂಡ 9.2 ಓವರ್ಗಳಲ್ಲೇ ಗುರಿ ತಲುಪಿ ಗೆಲುವು ಸಾಧಿಸಿದೆ. ಶಫಾಲಿ ವರ್ಮಾ ಮತ್ತೆ 24 ರನ್, ಶುಭಾ ಸತೀಶ್ 13 ಅಜೇಯರಾಗಿ ಉಳಿದರು.
ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಹರ್ಮನ್ ಪ್ರೀತ್ ಕೌರ್ (Harmanpreet Kaur) ಬಳಗ ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತ ಪೇರಿಸಿತ್ತು. 115.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಪ್ರತಿಯಾಗಿ ಆಡಿದ್ದ ದಕ್ಷಿಣ ಆಫ್ರಿಕಾ ವನಿತೆಯರ ತಂಡ ಮೊದಲ ಇನ್ನಿಂಗ್ಸ್ನಲ್ಲಿ 84.3 ಓವರ್ಗಳಿಗೆ 266 ರನ್ ಗಳಿಸಿ ಆಲೌಟ್ ಆಯಿತು. ಬಳಿಕ ಫಾಲೋ ಆನ್ ಗುರಿಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ 154.4 ಓವರ್ಗಳಲ್ಲಿ 373 ಗಳಿಸಿ ಆಲೌಟ್ ಆಯಿತು. ಇದರಿಂದ ಭಾರತ ತಂಡ 37 ರನ್ಗಳ ಗುರಿ ಪಡೆದು ಸುಲಭ ಜಯ ದಾಖಲಿಸಿತು.