ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಆಗಿರುವ ದಿ ಕೇರಳ ಸ್ಟೋರಿ ಸಿನಿಮಾದ ಟ್ರೈಲರ್ ಸಾಕಷ್ಟು ವಿವಾದ ಸೃಷ್ಟಿಸಿದೆ. ಇದೀಗ ಸಿನಿಮಾ ಬಿಡುಗಡೆಗೆ ಸ್ವತಃ ಕೇರಳದಲ್ಲಿ ವಿರೋಧ ವ್ಯಕ್ತವಾಗಿದ್ದು ಸಿನಿಮಾ ಬಿಡುಗಡೆ ಮಾಡಲು ಅಡ್ಡಗಾಲು ಹಾಕಲಾಗಿದೆ.
ಕೇರಳದ ಆಡಳಿತಾರೂಢ ಸಿಪಿಐಎಂ ಸೇರಿದಂತೆ ಕಾಂಗ್ರೆಸ್ ಇನ್ನಿತರೆ ಪಕ್ಷಗಳು ಸಿನಿಮಾದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಸಿನಿಮಾವು ಕೇರಳದಲ್ಲಿ ಬಿಡುಗಡೆ ಆಗದಂತೆ ತಡೆಯಲು ಸರ್ಕಾರಕ್ಕೆ ಮನವಿ ಮಾಡಿವೆ. ಸರ್ಕಾರವು ಸಹ ಸಿನಿಮಾದ ಬಿಡುಗಡೆ ತಡೆಯಲು ಕಾನೂನು ಕ್ರಮಗಳನ್ನು ಶೋಧಿಸುತ್ತಿರುವುದಾಗಿ ಹೇಳಿದೆ.
ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಕೇರಳದಲ್ಲಿ ನಡೆಯುತ್ತಿರುವ ಮತಾಂತರ ಹಾಗೂ ಯುವತಿಯರ ಮಾನವ ಕಳ್ಳಸಾಗಣೆ ವಿಷಯದ ಮೇಲೆ ಬೆಳಕು ಚೆಲ್ಲಲಾಗಿದೆ. ಕೇರಳದ ಹಿಂದು, ಕ್ರಿಶ್ಚಿಯನ್ ಯುವತಿಯರನ್ನು ಪ್ರೇಮದ ಬಲೆಗೆ ಬೀಳಿಸಿ ಅವರನ್ನು ಇಸ್ಲಾಂಗೆ ಮತಾಂತರ ಮಾಡಿಸಿ ಬಳಿಕ ತಾಲಿಬಾನಿಗಳನ್ನಾಗಿ ಬದಲಾಯಿಸುತ್ತಾರೆ ಎಂಬ ಸಿನಿಮಾದಲ್ಲಿ ಹೇಳಲು ಮುಂದಾಗಿದ್ದಾರೆ ನಿರ್ದೇಶಕರು. ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು ಸಿನಿಮಾ ಬಿಡಗುಡೆಗೆ ಸಾಕಷ್ಟು ಕಡೆಗಳಲ್ಲಿ ವಿರೋಧ ವ್ಯಕ್ತವಾಗಿದೆ.
ಟ್ರೈಲರ್ನಲ್ಲಿ ಕೇರಳದಲ್ಲಿ 32,000 ಹಿಂದು, ಕ್ರಿಶ್ಚಿಯನ್ ಯುವತಿಯರು ಮಹಿಳೆಯರು ಕಾಣೆಯಾಗಿದ್ದಾರೆ. ಅವರನ್ನು ಲವ್ ಜಿಹಾದಿಗೆ ಬಳಸಿಕೊಳ್ಳಲಾಗಿದೆ, ಮತಾಂತರ ಮಾಡಲಾಗಿದೆ, ಮಾನವ ಕಳ್ಳಸಾಗಣೆ ಮಾಡಿ ಭಯೋತ್ಪಾದನಾ ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಸಿನಿಮಾದ ಟ್ರೈಲರ್ನಲ್ಲಿಯೂ ಹೇಳಲಾಗಿದೆ.
ಕೇರಳವನ್ನು ಕರಾಳವಾಗಿ ತೋರಿಸುವ ‘ದಿ ಕೇರಳ ಸ್ಟೋರಿ’ ಸಿನಿಮಾದ ವಿರುದ್ಧ ಆಡಳಿತಾರೂಢ ಸಿಪಿಐಎಂ ಹಾಗೂ ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಇನ್ನಿತರೆ ಕೆಲವು ಪಕ್ಷಗಳು ಮುಗಿಬಿದ್ದಿವೆ. ಕಾಂಗ್ರೆಸ್, ಕೇರಳ ಕಾಂಗ್ರೆಸ್, ಡಿವೈಎಫ್ಐ, ಸಿಪಿಐಎಂ ಯುವ ಸಂಘ ಇನ್ನಿತರೆ ರಾಜಕೀಯ ಪಕ್ಷಗಳು ಸಂಘಟನೆಗಳು ದಿ ಕೇರಳ ಸ್ಟೋರಿ ಸಿನಿಮಾದ ಬಿಡುಗಡೆಯನ್ನು ತಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿವೆ. ”ಸಂಘ ಪರಿವಾರವು ಪ್ರಬಲ ಮಾಧ್ಯಮವೊಂದನ್ನು ಬಳಸಿಕೊಂಡು ಸುಳ್ಳುಗಳ ಮೂಲಕ ಕೇರಳಕ್ಕೆ ಅಪಮಾನ ಮಾಡುವ ಕಾರ್ಯವನ್ನು ಮಾಡುತ್ತಿದೆ” ಎಂದು ಸಿಪಿಐಎಂ ಯುವ ಸಂಘ ಆರೋಪಿಸಿದೆ.