ಬೆಂಗಳೂರು: ಕಾಂಗ್ರೆಸ್ ಭಯೋತ್ಪಾದಕರನ್ನು ಪೋಷಿಸುತ್ತಿದೆ ಎಂಬ ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ.
ಶನಿವಾರ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ. ವೋಟ್ ಬ್ಯಾಂಕ್ಗಾಗಿ ಭಯೋತ್ಪಾದಕರನ್ನು ಪೋಷಿಸಿದೆ ಎಂದು ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದರು. ಈ ಹೇಳಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ದೂರಿನಲ್ಲಿ ನಮೂದಿಸಿದ್ದಾರೆ.
ಬಳ್ಳಾರಿಯಲ್ಲಿ ಚುನಾವಣಾ ಭಾಷಣ ಮಾಡಿದ್ದ ನರೇಂದ್ರ ಮೋದಿ ಅವರು, ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ಗಟ್ಟಿ ಮಾಡುವ ಉದ್ದೇಶದಿಂದ ಭಯೋತ್ಪಾದಕರನ್ನು ಪೋಷಿಸಿದೆ. ಭಯೋತ್ಪಾದಕರ ಜೊತೆಗೆ ನಂಟಿರುವವರ ಜೊತೆಗೆ ಕಾಂಗ್ರೆಸ್ ಹಿಂಬಾಗಿಲ ರಾಜಕೀಯ ಮಾಡುತ್ತಿದೆ ಎಂದು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ವಿರುದ್ಧ ದೂರು ನೀಡಿದ್ದಾರೆ. ಮೋದಿ ಚುನಾವಣಾ ಪ್ರಚಾರದಲ್ಲಿ ಆಧಾರ ರಹಿತವಾದ ಆರೋಪವನ್ನು ಮಾಡಿದ್ದಾರೆ. ಇಂತಹ ಆರೋಪವನ್ನು ಈವರೆಗೆ ಯಾವ ಪ್ರಧಾನಿಯೂ ಮಾಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದೆ.
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್, ಎಐಸಿಸಿ ವಕ್ತಾರ ಪವನ್ ಖೇರಾ, ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಹಾಗೂ ಇತರರು ಉಪಸ್ಥಿತರಿದ್ದರು.