ಬೆಂಗಳೂರು: ಸೀತೆ ಯಾರು, ಶೂರ್ಪನಖಿ ಯಾರು ಅಂತಾ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ಗೆ (Congress) ಇಷ್ಟೇ ಗೊತ್ತಿರೋದು. ಇದೇ ಅವರ ಸಂಸ್ಕೃತಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡರು ತನಗೆ ಶೂರ್ಪನಖಿ ಎಂದು ಹೇಳಿರುವ ವಿಚಾರವಾಗಿ ಬಿಜೆಪಿ (BJP) ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದಕ್ಕೆ ಜನ ಉತ್ತರ ಕೊಡುತ್ತಾರೆ.
ಕಾಂಗ್ರೆಸ್ ಯಾವಾಗಲೂ ಇದೇ ರೀತಿಯ ಕೀಳು ಮತ್ತು ಕೆಳ ಮಟ್ಟದ ಸಂಸ್ಕೃತಿಯನ್ನು ಪ್ರಯೋಗಿಸುತ್ತದೆ. ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಸದನದಲ್ಲಿ ಇಂದಿರಾ ಗಾಂಧಿಯವರಿಗೆ ದುರ್ಗೆ ಎಂದು ಕರೆದಿದ್ದರು. ಇದು ನಮ್ಮ ಸಂಸ್ಕೃತಿ. ಆದರೆ ಕಾಂಗ್ರೆಸ್ ಸಂಸ್ಕೃತಿ ಯಾವಾಗಲೂ ಕೆಳಮಟ್ಟದಲ್ಲಿ ಮಾತನಾಡೋದೇ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಚುನಾವಣಾ ಆಯೋಗ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ಕೊಟ್ಟಿದೆ. ಜಾಹಿರಾತಿನ ಮೂಲಕ ಕಾಂಗ್ರೆಸ್ ಸುಳ್ಳು ಆರೋಪ ಮಾಡಿದೆ.
ಇದರ ಬಗ್ಗೆ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಆಯೋಗ ಕೇಳಿದೆ. ಕಾಂಗ್ರೆಸ್ ಯಾವ ಮುಖ ಇಟ್ಟುಕೊಂಡು ಭ್ರಷ್ಟಾಚಾರದ (Corru ption) ಬಗ್ಗೆ ಮಾತನಾಡುತ್ತಿದೆ? ಅವರ ಸರ್ಕಾರ ಬಂದಾಗ ಎಷ್ಟು ರೇಟ್ ಇತ್ತು ಅದರ ಆಧಾರದಲ್ಲಿ ನಮ್ಮ ಮೇಲೆ ಆರೋಪ ಮಾಡಿದ್ದಾರೆ. ಕಾಂಗ್ರೆಸ್ನ ಆರೋಪಗಳು ಸುಳ್ಳು ಮತ್ತು ನಿರಾಧಾರ. ಪಕ್ಷದ ಹಲವು ನಾಯಕರಿಗೆ ಕುಟುಂಬ ಹಿನ್ನೆಲೆ ಇಲ್ಲ. ಪಕ್ಷ, ದೇಶ ಎಂದು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಚಿಕೆ ಇಲ್ಲದೆ ನಮ್ಮ ಮೇಲೆ ಆರೋಪ ಮಾಡಿದೆ. ಕೂಡಲೇ ಕಾಂಗ್ರೆಸ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.