ಚಿಕ್ಕಬಳ್ಳಾಪುರ: ದ್ವೇಷ ರಾಜಕಾರಣದ ಮೂಲಕವೇ ಕಾಂಗ್ರೆಸ್ (Congress) ಸರ್ಕಾರದ ಆಡಳಿತ ಆರಂಭ ಆಗುತ್ತಿದೆ. ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಬಿವೈ ವಿಜಯೇಂದ್ರ (BY Vijayendra) ಹೇಳಿಕೆ ನೀಡಿದ್ದಾರೆ. ಕೆಂಪೇಗೌಡ ಏರ್ಪೋರ್ಟ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಅಶ್ವಥ್ ನಾರಾಯಣ್ ಹಾಗೂ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರವೀಣ್ ನೆಟ್ಟಾರು ಪತ್ನಿಗೆ ಅನುಕಂಪದ ಆಧಾರದ ಮೇಲೆ ನೀಡಿದ ಕೆಲಸ ಕಿತ್ತುಕೊಂಡಿದೆ. ಈ ತರಹದ ಕೀಳುಮಟ್ಟಕ್ಕೆ ಸರ್ಕಾರ ಇಳಿಯುತ್ತದೆ ಎಂಬ ನೀರಿಕ್ಷೆಯನ್ನು ನಾನು ಮಾಡಿರಲಿಲ್ಲ. ಬರುವಂತಹ ದಿನಗಳಲ್ಲಿ ಈ ಬಗ್ಗೆ ಎಲ್ಲವನ್ನೂ ಪ್ರಶ್ನೆ ಮಾಡುತ್ತೇವೆ ಎಂದರು. ಕಾಂಗ್ರೆಸ್ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,
ಕಾಂಗ್ರೆಸ್ನವರು ಚುನಾವಣೆ ವೇಳೆ ಸಾಕಷ್ಟು ನೀರಿಕ್ಷೆಗಳನ್ನು ಜನರಲ್ಲಿ ಮೂಡಿಸಿದ್ದಾರೆ. ಅಪೇಕ್ಷೆಗಳು ಸಾಕಷ್ಟಿವೆ. ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಗಳನ್ನು ಈಡೇರಿಸುತ್ತದೆ ಎಂದು ಜನ ಕಾಯುತ್ತಿದ್ದಾರೆ ಎಂದರು. ತಡವಾಗಿ ಆದರೂ ಸಂಪೂರ್ಣ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವುದು ಸಂತೋಷ. ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಗ್ಯಾರಂಟಿ ಕಾರ್ಡುಗಳ ಅನುಷ್ಠಾನ ಮಾಡುವುದಾಗಿ ಹೇಳಿದ್ರು. ಗ್ಯಾರಂಟಿ ಕಾರ್ಡುಗಳ ಬಗ್ಗೆ ರಾಜ್ಯಾದ್ಯಂತ ಜನರಲ್ಲಿ ಗೊಂದಲಗಳು ಉಂಟಾಗಿದೆ. ಗ್ಯಾರಂಟಿ ಭರವಸೆ ಆಶ್ವಾಸನೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಬಿವೈ ವಿಜಯೇಂದ್ರ ಆಗ್ರಹಿಸಿದರು.