ಬೆಂಗಳೂರು:- ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವು ತಾನು ಅಧಿಕಾರಕ್ಕೆ ಬರೋ ಮುನ್ನ ಘೋಷಿಸಿದ 5 ಗ್ಯಾರಂಟಿ ಗಳನ್ನು ಕೊಟ್ಟ ಮಾತಿನಂತೆ ಜಾರಿ ಮಾಡಿ ನುಡಿದಂತೆ ನಡೆದ ಸರ್ಕಾರ ಎನಿಸಿಕೊಂಡಿದೆ.
ಇನ್ನೂ ಜಾರಿಯಿಂದ ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿದೆ.
ಹೀಗಾಗಿ ಪಂಚಖಾತ್ರಿ ಯೋಜನೆ ಗಳನ್ನು ಜಾರಿಗೊಳಿಸಿ, ಬೊಕ್ಕಸವನ್ನು ಬರಿದು ಮಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಆದಾಯ ಮೂಲಗಳನ್ನು ಹುಡುಕಲು ಮುಂದಾಗಿದ್ದು, ಆಸ್ತಿ ನಗದೀಕರಣ ಮೂಲಕ ಸಂಪನೂಲ ಕ್ರೂಢೀಕರಣಕ್ಕೆ ಮುಂದಾಗಿದೆ.
ತೆರಿಗೆಯೇತರ ಆದಾಯ ಸಂಪನೂಲಗಳನ್ನು ಹೆಚ್ಚಿಸಲು, ಸರ್ಕಾರದ ಆಸ್ತಿಗಳ ಸಮರ್ಪಕ ಬಳಕೆ, ನಿರ್ವಹಣೆ ಮತ್ತು ತನೂಲಕ ಖಾಸಗಿ ಬಂಡವಾಳವನ್ನು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಅಕರ್ಷಿಸಲು ಸಲಹೆಗಳನ್ನು ನೀಡಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 2024- 25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯದ ತೆರಿಗೆಯೇತರ ರಾಜಸ್ವ ಸಂಗ್ರಹ ಸಾಮರ್ಥ್ಯ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಆಸ್ತಿ ನಗದೀಕ ರಣದ ಅವಕಾಶವನ್ನು ಗುರುತಿಸಲು ನಿವೃತ್ತ ಐಎಎಸ್ ಅಧಿಕಾರಿ ಡಾ. ಕೆ.ಪಿ. ಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿಯನ್ನು ರಚಿಸಲಾಗಿದೆ.
ಸಮಿತಿಯಲ್ಲಿ ಪರೋಕ್ಷ ತೆರಿಗೆ ಮತ್ತು ಸುಂಕಗಳ ಕೇಂದ್ರಿಯ ಮಂಡಳಿ ಮಾಜಿ ಅಧ್ಯಕ್ಷ ನಜೀಬ್ ಶಾ, ನಿವೃತ್ತ ಐಎಎಸ್ ಅಧಿಕಾರಿ ಎಚ್. ಶಶೀಧರ್, ಐಎಸ್ಇಸಿ ಸಂಸ್ಥೆಯ ಪ್ರೊಫೆಸರ್ ಡಾ. ಕೃಷ್ಣರಾಜು, ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸದಸ್ಯರಾಗಿದ್ದಾರೆ.
ರಾಜ್ಯದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಕಾರ್ಯವ್ಯಾಪ್ತಿಯು ಇಲಾಖೆಗಳ ಕೆಲವು ಯೋಜನೆಗಳ ನಿರ್ವಹಣೆ ಮತ್ತು ಅನುಷ್ಠಾನಕ್ಕೆ ಸೀಮಿತಗೊಂಡಿದೆ. ಹೊಸ ಮೂಲ ಸೌಕರ್ಯಗಳು ಹಾಗೂ ಸಂಪನೂಲಗಳನ್ನು ಸೃಷ್ಟಿಸಿ ರಾಜ್ಯವನ್ನು ಅಭಿವೃದ್ದಿಯ ಪಥದಲ್ಲಿ ಕೊಂಡೊಯ್ಯುವ ವಿಶಾಲ ಕಾರ್ಯವ್ಯಾಪ್ತಿಯನ್ನು ಸರ್ಕಾರ ಹೊಂದಿದೆ. ಇದಕ್ಕಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಪಾಲುಗಾರಿಕೆಯನ್ನು ಹೆಚ್ಚಿಸಲು, ಆಸ್ತಿ ನಗದೀಕರಣ ಗುರುತಿಸಲು ಸಮಿತಿ ಕೆಲಸ ನಿರ್ವಹಿಸಬೇಕಿದೆ ಎಂದು ಕಳೆದ ಆಗಸ್ಟ್ 23ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಈ ಸಮಿತಿಯು ಹೊಸ ತೆರಿಗೆಯೇತರ ಆದಾಯದ ಮೂಲಗಳನ್ನು ಗುರುತಿಸಬೇಕು, ಖಾಸಗಿ ಸಹಭಾಗಿತ್ವದಲ್ಲಿ ಆಸ್ತಿ ನಗದೀಕರಣ ಮೂಲಕ ಆದಾಯ ಹೆಚ್ಚಿಸಲು ಇರುವ ಹೊಸ ಅವಕಾಶಗಳು ಹಾಗೂ ಕಾರ್ಯ ಸಾಧ್ಯವಾದ ಯೋಜನೆಗಳನ್ನು ಗುರುತಿಸಬೇಕು, ರಾಜ್ಯದ ಪ್ರಸ್ತುತ ತೆರಿಗೆಗಳು, ತೆರಿಗೆಯೇತರ ಆದಾಯದ ಮೂಲಗಳನ್ನು ವಿಸ್ತರಿಸಲು ಮತ್ತು ತೆರಿಗೆ ಸಂಗ್ರಹಣೆಯನ್ನು ಹೆಚ್ಚಿಸಲು ಕಾರ್ಯ ಸಾಧ್ಯವಿರುವ ಸೂಕ್ತ ಶಿಫಾರಸ್ಸುಗಳನ್ನು ಮಾಡಬೇಕು ಎಂದು ಸೂಚಿಸಲಾಗಿದೆ.
ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಆಸ್ತಿ ನಗದೀಕರಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಹಾಗೂ ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ಬಲಿಷ್ಠ ನಿಯಮಾವಳಿಗಳು, ಪರಿಣಾಮಕಾರಿ ಕಾರ್ಯತಂತ್ರ ಮತ್ತು ಪಾರದರ್ಶಕ ಕಾರ್ಯವಿಧಾನಗಳನ್ನು ರೂಪಿಸಬೇಕು.
ಯಾವುದೇ ಇತರ ನಿಬಂಧನೆಗಳನ್ನು ಸರ್ಕಾರ ಸಮಿತಿಗೆ ಕಾಲಕಾಲಕ್ಕೆ ಸೂಚಿಸಬಹುದಾಗಿದ್ದು, ಸಮಿತಿ ತನ್ನದೇ ಆದ ಕಾರ್ಯವಿಧಾನಗಳನ್ನು ರೂಪಿಸಿಕೊಂಡು, ಪರಶೀಲನಾರ್ಹ ಅಂಶಗಳಿಗೆ ಅಗತ್ಯ ಎನಿಸಿದ ಮಾಹಿತಿಗಳನ್ನು ವಿವಿಧ ಇಲಾಖೆಗಳಿಂದ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.