ಬೆಂಗಳೂರು: ಮೋದಿ ಸರ್ಕಾರ ತೆಗೆದು ಹಾಕಿರುವ ವಿಧಿ370ರ ಮರುಸ್ಥಾಪನೆವರೆಗೂ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ..ಭಾರತದ ಕಲ್ಪನೆಯ ಉಳಿವಿಗಾಗಿ, ಇತರ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಮೆಹಬೂಬಾ ಮುಫ್ತಿ, ‘ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರುಸ್ಥಾಪಿಸುವವರೆಗೆ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ… ಸದ್ಯದಲ್ಲಿಯೇ ವಿಧಾನಸಭೆ ಚುನಾವಣೆ ನಡೆಯುತ್ತದೆ ಎಂದು ನನಗನ್ನಿಸುತ್ತಿಲ್ಲ. ಭಾರತೀಯ ಜನತಾ ಪಕ್ಷ (ಬಿಜೆಪಿ) ಯಾವುದೇ ವಿರೋಧವನ್ನು ಬಯಸುವುದಿಲ್ಲ. ದೆಹಲಿ ಸರ್ಕಾರ ಶಕ್ತಿಹೀನವಾಗಿದೆ. ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳಿದರು
ಅಂತೆಯೇ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಜಿ-20 ದೇಶದ ಕಾರ್ಯಕ್ರಮ.. ಆದರೆ ಬಿಜೆಪಿ ಅದನ್ನು ಹೈಜಾಕ್ ಮಾಡಿದೆ. ಬಿಜೆಪಿ ಕಾರ್ಯಕ್ರಮದ ಚಿನ್ಹೆಯನ್ನು ಕಮಲಕ್ಕೆ ಬದಲಾಯಿಸಿದೆ. ಜನರು ದೇಶದೊಂದಿಗೆ ಬೆಸೆದುಕೊಂಡಿರಬೇಕೇ ಹೊರತು ಯಾವುದೇ ಪಕ್ಷದೊಂದಿಗೆ ಅಲ್ಲ… ಈ ಪ್ರದೇಶದಲ್ಲಿ ನಾವು ನಮ್ಮ ದೇಶದ ನಾಯಕತ್ವವನ್ನು ಸ್ಥಾಪಿಸುತ್ತೇವೆ.. ಏಕೆ ಸಾರ್ಕ್ ಶೃಂಗಸಭೆ ನಡೆಸಿ ಸಮಸ್ಯೆ ಬಗೆಹರಿಸಬಾರದು ಎಂದು ಮೆಹಬೂಬಾ ಹೇಳಿದರು.