ಬೆಂಗಳೂರು: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಲ್ಲಾ ಪಕ್ಷಗಳು ಒಗ್ಗೂಡುವಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಪದ್ಮನಾಭ ನಗರದ ನಿವಾಸದಲ್ಲಿ ಮಾತನಾಡಿದ ಅವರು, ನಾವೇನು ಕಾಂಗ್ರೆಸ್ ಜೊತೆ ಹೋಗೋಕೆ ಆಗುತ್ತಾ? ಈಗ ಕಾಂಗ್ರೆಸ್ನವರು ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಅವರ ಜೊತೆ ನಾವು ಮಾತನಾಡುವುದಕ್ಕೆ ಆಗುತ್ತಾ? ಜನ ಅವರನ್ನು ಇವಾಗ ಮೇಲೆ ಇಟ್ಟಿದ್ದಾರೆ.
ಜನ ಅವರನ್ನು ಕೆಳಗೆ ಇಳಿಸಬೇಕಲ್ಲಾ? ನೋಡೋಣ ಬನ್ನಿ ಮುಂದೆ ಏನಾಗಲಿದೆ ಅಂತಾ ಎಂದು ಹೆಚ್ಡಿಕೆ ಮಾರ್ಮಿಕವಾಗಿ ನುಡಿದರು. ಇನ್ನೂ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿ ವಿಚಾರವಾಗಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಮಾರಸ್ವಾಮಿ ಅವರು, ಮತ ಪಡೆಯಲು ಇವೆಲ್ಲಾ ಅನಿವಾರ್ಯ ಅಂತಾ ಹೇಳಿದ್ದಾರೆ.
ಇವೆಲ್ಲಾ ಸತ್ಯ ನಿಧಾನವಾಗಿ ಒಂದೊಂದೇ ಹೊರಬರ್ತಾ ಇದೆ. ಇನ್ನೂ ಯಾರ್ಯಾರು ಏನು ಮಾತನಾಡುತ್ತಾರೋ ಕಾದು ನೋಡೋಣ ಎಂದರು.
ಕಾಂತರಾಜು ವರದಿ ಬಹಿರಂಗ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಸಿಎಂ ಸಿದ್ದರಾಮಯ್ಯ ಆ ವರದಿಯನ್ನು ಬಿಡುಗಡೆ ಮಾಡ್ತೀವಿ ಅಂದಿದ್ದಾರೆ. ಅದರಲ್ಲಿ ಯಾವ ಗುಮ್ಮ ಇದೆ ಅಂತ ನೋಡೋಣ. ವರದಿ ಬಹಿರಂಗಕ್ಕೆ ಸ್ವಾಗತ ಇದೆ ಎಂದರು