ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಚೀನಾ ಹವಣಿಸುತ್ತಿದ್ದು, ಇದಕ್ಕೆ ಕಾಂಗ್ರೆಸ್ ಸಹ ಕೈ ಜೋಡಿಸಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಗಂಭೀರವಾಗಿ ಆರೋಪಿಸಿದರು.
ಧಾರವಾಡದ ನವಲಗುಂದ ವಿಧಾನಸಭಾ ಕ್ಷೇತ್ರದ ಶಲವಡಿ ಗ್ರಾಮದಲ್ಲಿ ಇಂದು ರಾತ್ರಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾದರೆ ಭಾರತವನ್ನು ಆರ್ಥಿಕ ಮುಂಚೂಣಿಗೆ ತರುವ ಜತೆಗೆ ವಿಶ್ವ ನಾಯಕರಾಗಿ ಬಿಡುತ್ತಾರೆ ಎಂಬ ತಳಮಳ ಚೀನಾ, ಪಾಕ್ ಸೇರಿದಂತೆ ಬಹು ರಾಷ್ಟ್ರಗಳನ್ನು ಕಾಡುತ್ತಿದೆ. ಈ ಬಾರಿ ಮೋದಿ ಅವರನ್ನು ಸೋಲಿಸಲು ಚೀನಾ ಎಲ್ಲ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಚೀನಾದೊಂದಿಗೆ ಕಾಂಗ್ರೆಸ್ ಸಹ ಕೈ ಜೋಡಿಸಿದೆ ಎಂದು ಜೋಶಿ ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದರು.
ಜೊತೆಗೆ ಮೋದಿ ಪ್ರಭಾವ ಕುಗ್ಗಿಸಲು ಕಾಂಗ್ರೆಸ್ ನಮ್ಮ ಶತ್ರು ರಾಷ್ಟ್ರಗಳೊಂದಿಗೆ ಸೇರಿ ಸಂಚು ಮಾಡುತ್ತಿದೆ. ಆದರೆ, ಮೋದಿ ಅವರಿಗೆ ಅಸಂಖ್ಯಾತ ಭಾರತೀಯರ ಬೆಂಬಲ, ಆಶೀರ್ವಾದವಿದೆ. ಹಾಗಾಗಿ ಇದೆಲ್ಲಾ ಫಲಿಸದು. ಅಲ್ಲದೆ ಈ ಹಿಂದೆ ಕಮಿಷನ್ ಆಸೆಗೆ ಬಿದ್ದ ಕಾಂಗ್ರೆಸ್ ಕೋವಿಡ್ ಲಸಿಕೆ ವಿದೇಶದಿಂದ ತರಿಸಿರೆಂದು ಕಾಂಗ್ರೆಸ್ ನವರು ಬೊಬ್ಬೆ ಹೊಡೆದರು. ಆದರೆ, ಮೋದಿ ಅವರು ದೇಶೀ ಲಸಿಕೆಯನ್ನೇ ಉತ್ಪಾದಿಸಿ ಭಾರತೀಯರ ಜೀವ ಉಳಿಸಿದರು. ದೇಶದ ಆರ್ಥಿಕತೆ ಬದಿಗಿಟ್ಟು 60 ದೇಶಗಳಿಗೂ ಲಸಿಕೆ ರವಾನಿಸಿ ಸುಜೀವಿನಿ ಯಾದರು.
ಅಮೇರಿಕಾದಲ್ಲಿ ಲಸಿಕೆ ಹಾಕುವ ದಿನದಂದೇ ಭಾರತೀಯ ಲಸಿಕೆ ನಮ್ಮ ಜನರಿಗೆ ಕೊಡಬೇಕು ಎಂದು ವಿಜ್ಞಾನಿಗಳಿಗೆ ಹೇಳಿ ಲಸಿಕೆ ತಯಾರಿಸಿ ವಿಶ್ವದ ಹಿರಿಯಣ್ಣನಿಗೂ ಪ್ರಧಾನಿ ಮೋದಿ ಸೆಡ್ಡು ಹೊಡೆದರು ಎಂದು ಸಚಿವ ಜೋಶಿ ಸ್ಮರಿಸಿದ ಅವರು, ಕೊರನಾ ಲಸಿಕೆ ನೀಡಲಾರಂಭಿಸಿದ ಸಮಯದಲ್ಲಿ, ಈ ಲಸಿಕೆ ಪಡೆದವರಿಗೆ ಮಕ್ಕಳಾಗಲ್ಲ ಎಂದರು ಕಾಂಗ್ರೆಸ್ಸಿಗರು. ಅವರೂ ಲಸಿಕೆ ಪಡೆದಿದ್ದಾರೆ. ಅವರಿಗೂ ಈಗ ಮಕ್ಕಳಾಗಿವೆ ಎಂದು ಪ್ರಶ್ನಿಸಿದರು. ಜೊತೆಗೆ ಗ್ಯಾರೆಂಟಿ ಘೋಷಣೆ ಮಾಡಿದ ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ. ಉಚಿತ ವಿದ್ಯುತ್ ಕೊಟ್ಟು ವಿದ್ಯುತ್ ಕಂಪನಿಗಳಿಗೆ ತುಂಬಲು ಹಣವಿಲ್ಲದೆ ಕರೆಂಟ್ ಬಂದ್ ಮಾಡಿ ಎನ್ನುತ್ತಿದೆ ಎಂದು ಭಾಷಣದ ಉದ್ದಕ್ಕೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.