ಬೆಂಗಳೂರು: ಕಾಂಗ್ರೆಸ್ನವರು (Congress) ಕಳ್ಳತನ ಮಾಡಿದ್ದಾರೆ. ಅದಕ್ಕೆ ಐಟಿಗೆ (IT) ಭಯ ಬೀಳುತ್ತಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ವಿರುದ್ದ ಸೋಲುವ ಭಯದಲ್ಲಿ ಬಿಜೆಪಿ (BJP) ಐಟಿ ದಾಳಿ ಮಾಡಿಸಲು ಸಿದ್ಧವಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ ಸೋಲುವುದು ನಿಶ್ಚಿತ. ನಮಗೆ ಗೆಲ್ಲುವ ವಿಶ್ವಾಸವಿದೆ. ಕಳ್ಳನ ಜೀವ ಉಳ್ಳುಳ್ಳಗೆ ಅಂತಾರಲ್ಲ. ಹಾಗೇ ಕಾಂಗ್ರೆಸ್ ಅವರು ಕಳ್ಳತನ ಮಾಡಿದ್ದಾರೆ. ಅದಕ್ಕೆ ಈ ರೀತಿ ಭಯ ಬೀಳುತ್ತಿದ್ದಾರೆ ಎಂದು ಕಿಡಿಕಾರಿದರು.
ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳಬೇಕು. ಚುನಾವಣೆ ಆಯೋಗದ ಅಧೀನದಲ್ಲಿ ಎಲ್ಲವೂ ನಡೆಯುತ್ತವೆ. ಅವರೇ ಎಲ್ಲವೂ ಮಾನಿಟರ್ ಮಾಡುತ್ತಿದ್ದಾರೆ. ಈಗಾಗಲೇ ಅಧಿಕೃತವಾಗಿ ಐಟಿ ಅಧಿಕಾರಿಗಳು ಪ್ರತೀ ಜಿಲ್ಲೆಯಲ್ಲಿ ಇದ್ದಾರೆ. ಚುನಾವಣಾ ಆಯೋಗ ಕೂಡಾ ದಾಳಿ ಮಾಡುತ್ತಿದೆ. ಎಲ್ಲಾ ಪಕ್ಷಗಳ ವಸ್ತುಗಳನ್ನು ಸೀಜ್ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಒಂದು ಸ್ವಾಯತ್ತತೆ ಸಂಸ್ಥೆ. ಅದರ ಕೆಲಸ ಅದು ಮಾಡುತ್ತದೆ. ಐಟಿ ದಾಳಿ ಆಗುತ್ತಿರುವುದಕ್ಕೆ ಕಾಂಗ್ರೆಸ್ಗೆ ಭಯ ಶುರುವಾಗಿದೆ ಎಂದರು.
ಇಷ್ಟು ವರ್ಷ ಕಾಂಗ್ರೆಸ್ ಸಾಕಷ್ಟು ಹಣ ಮಾಡಿದೆ. ಕಾಂಗ್ರೆಸ್ನವರಿಗೆ ಕಪ್ಪು ಹಣ (Black Money) ಹೊರಬರುತ್ತದೆ ಎನ್ನುವ ಭಯ. ಕಾಂಗ್ರೆಸ್ನವರು ದಾಳಿ ಮಾಡುತ್ತಾರೆ ಎಂದು ಮುಂಚಿತವಾಗಿ ಹೇಳಿ ದಾಳಿಯ ತೀವ್ರತೆ ಕಡಿಮೆ ಮಾಡುವ ಉಪಾಯ ಮಾಡುತ್ತಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಲು ಹೀಗೆ ಮಾಡುತ್ತಿದ್ದಾರೆ. ಇವೆಲ್ಲ ನಡೆಯುವುದಿಲ್ಲ. ಯಾರು ಕಳ್ಳರಿದ್ದಾರೆ ಅವರು ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ಹರಿಹಾಯ್ದರು.