ಮಾ.12 ರಂದು ಐಐಟಿ ಉದ್ಘಾಟನೆಗೆ ಬರುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಪ್ಪು ಬಾವುಟ ತೋರಿಸಲು ಕಾಂಗ್ರೆಸ್ ಸಜ್ಜಾಗಿದೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಜಲಮಂಡಳಿ ನೌಕರರ ಬಾಕಿ ವೇತನ ಬಿಡುಗಡೆ ಹಾಗೂ ಎಲ್ಲಾ ನೌಕರರನ್ನು ಮರಳಿ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತಾಗಿ ಪ್ರಧಾನಿ ಮೋದಿ ಅವರು ಸ್ಥಳೀಯ ನಾಯಕರಿಗೆ ಸೂಚನೆ ನೀಡಬೇಕು.
ಇಲ್ಲದೇ ಹೋದರೆ ನಾವು ಪಕ್ಷಾತೀತವಾಗಿ ಮೋದಿ ಅವರಿಗೆ ಕಪ್ಪು ಬಾವುಟ ತೋರಿಸಲಿದ್ದೇವೆ ಎಂದರು. 650 ಕುಟುಂಬಗಳು ಬೀದಿಗೆ ಬಿದ್ದಿವೆ. ಜಲಮಂಡಳಿ ನೌಕರರ ವೇತನವನ್ನು ಬಾಕಿ ಇರಿಸಿಕೊಳ್ಳಲಾಗಿದೆ.
ಈಗಾಗಲೇ ಕೆಲಸದಿಂದ ವಜಾಗೊಳಿಸಿರುವ ಜಲಮಂಡಳಿ ನೌಕರರನ್ನು ಮರಳಿ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಶಾಸಕ ಅರವಿಂದ ಬೆಲ್ಲದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಎಲ್ಲವನ್ನೂ ಸರಿ ಮಾಡುತ್ತೇವೆ ಎನ್ನುತ್ತಾರೆ. ಆದರೆ, ಇಲ್ಲಿಯವರೆಗೂ ನೌಕರರ ಸಮಸ್ಯೆಗಳು ಬಗೆಹರಿದಿಲ್ಲ. ಇದು ಕೇವಲ ಕಾಂಗ್ರೆಸ್ ಪಕ್ಷ ಪ್ರತಿಭಟನೆಯಲ್ಲ. ಪಕ್ಷಾತೀತವಾಗಿ ನಾವು ಈ ಆಗ್ರಹ ಮಾಡುತ್ತಿದ್ದೇವೆ. ಬಿಜೆಪಿಯವರೂ ಕೂಡ ಮೋದಿಗೆ ಕಪ್ಪು ಬಾವುಟ ತೋರಿಸಲು ನಮ್ಮ ಜೊತೆ ಬಂದರೆ ಅವರಿಗೂ ಸ್ವಾಗತ ಮಾಡುತ್ತೇವೆ ಎಂದರು. ಐಐಟಿ ಇಲ್ಲಿಗೆ ಬರಲು ಆರ್.ವಿ.ದೇಶಪಾಂಡೆ ಕಾರಣ. ಈಗ ಬಿಜೆಪಿಯವರು ಈ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಚಿಂಚೋರೆ ವ್ಯಂಗ್ಯವಾಡಿದರು.