ಚಿಕ್ಕಮಗಳೂರು:- ಭದ್ರತಾ ಲೋಪದ ಹಿಂದೆ ಕಾಂಗ್ರೆಸ್ ಪಕ್ಷದ ಟೂಲ್ ಕಿಟ್ ರಾಜಕಾರಣ ಇದ್ದಂತೆ ಮಾಜಿ ಶಾಸಕ ಸಿಟಿ ರವಿ ಅನುಮಾನ ವ್ಯಕ್ತಪಡಿಸಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಅದರ ಹಿನ್ನೆಲೆ ಅರ್ಥವಾಗುವ ಮುಂಚೆಯೇ ಯುವ ಕಾಂಗ್ರೆಸ್ ಕಾರ್ಯಕರ್ತರು ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಾರೆ.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಪ್ರಶ್ನೆ ಮಾಡುತ್ತಾರೆ. ತನಿಖೆ ಮಾಡಿ ಎಂದು ಒತ್ತಾಯಿಸುವುದು ಸರಿ ಆದರೆ. ಅದನ್ನೂ ಮೀರಿ ಸಂಸದ ಪ್ರತಾಪ್ ಸಿಂಹ ಅವರನ್ನು ಗುರಿ ಮಾಡಿದರು ಎಂದರು.
ಇತ್ತೀಚೆಗೆ ಕಾಂಗ್ರೆಸ್ ಸಂಸದನೊಬ್ಬನ ಮನೆಯಲ್ಲಿ ಐಟಿ ದಾಳಿ ವೇಳೆ ದಾಖಲೆ ಪ್ರಮಾಣದ ಹಣ ಪತ್ತೆಯಾಗಿದೆ. 500 ಕೋಟಿ ರು.ಗೂ ಹೆಚ್ಚಿನ ಅಕ್ರಮ ಆಸ್ತಿ, 350 ಕೋಟಿ ರು.ಗಳಿಗಿಂತ ಹೆಚ್ಚಿನ ನಗದು ಪತ್ತೆಯಾಗಿತ್ತು. ಇದೇ ವೇಳೆ 5 ರಾಜ್ಯಗಳ ಚುನಾವಣೆ ಪೈಕಿ 4 ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತು. ಇವರೆಡರ ವಿಷಯಾಂತರ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಸಂಸತ್ನ ಭದ್ರತಾ ಲೋಪದ ಹೆಸರಲ್ಲಿ ಟೂಲ್ ಕಿಟ್ ರಾಜಕಾರಣ ಮಾಡಿರುವ ಅನುಮಾನ ಕಾಡುತ್ತಿದೆ ಎಂದರು.
ಇದರ ಹಿಂದೆ ಕಾಣದ ಕೈಗಳು ಎಷ್ಟಿದೆಯೋ ಕಾಂಗ್ರೆಸ್ನ ಕೈಗಳು ಕೆಲಸ ಮಾಡಿರುವ ಸಾಧ್ಯತೆ ಇದೆ. ಇಷ್ಟಾದರೂ ಭದ್ರತಾ ಲೋಪವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಕೇವಲ ರಾಜಕೀಯ ಆರೋಪಕ್ಕೆ ಸೀಮಿತವಾಗಿ ನೋಡಬೇಕೆಂದು ನಾವು ಬಯಸುವುದಿಲ್ಲ. ಗಂಭೀರ ತನಿಖೆ ಈಗಾಲೇ ಆಗುತ್ತಿದೆ. ನಂತರ ನಿಜಾಂಶ ಹೊರಗೆ ಬರಲಿದೆ ಎಂದು ಹೇಳಿದರು.