ಬೆಂಗಳೂರು: ಕಾಂಗ್ರೆಸ್ ನವರು ಗ್ಯಾರಂಟಿಯಲ್ಲಿ ದೋಖಾ ಮಾಡುತ್ತಾ ಇದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಸಂಬಂಧ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಮಾತನಾಡಿದ ಅವರು, ನಾವು ಖಂಡಿತವಾಗಿ ಗ್ಯಾರಂಟಿಗಳ ವಿಚಾರದಲ್ಲಿ ಸರ್ಕಾರಿ ಆದೇಶವಾದ ನಂತರ ಜನರ ಬಳಿ ಹೋಗುತ್ತೇವೆ.
ಇದರಲ್ಲಿ ಸಾಕಷ್ಟು ಹಿಡನ್ ಅಜೆಂಡಾ ಇದೆ. ಚುನಾವಣಾ ಪೂರ್ವದಲ್ಲಿ ಜನರಿಗೆ ಬಹಳಷ್ಟು ದೊಡ್ಡ ಬೆಟ್ಟದಷ್ಟು ಭರವಸೆ ತೋರಿಸಿದ್ದರು. ಜನರ ನಿರೀಕ್ಷೆಗಳನ್ನು ದೊಡ್ಡಮಟ್ಟದಲ್ಲಿ ಇರಿಸಿ ಕಾಂಗ್ರೆಸ್ ಚುನಾವಣೆ ಗೆದ್ದಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಚುನಾವಣಾ ಪೂರ್ವದ ಮಾತು, ಚುನಾವಣಾ ನಂತರದ ಮಾತುಗಳಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಎಲ್ಲರಿಗೂ 200 ಯೂನಿಟ್ ಕರೆಂಟ್ ಫ್ರೀ ಅಂತಾ ಘಂಟಾ ಘೋಷವಾಗಿ ಹೇಳಿದ್ದಾರೆ. ಅವರು ಹೇಳಿದ ಪ್ರಕಾರ ವಿದ್ಯುತ್ ಬಳಕೆ 200 ಯೂನಿಟ್ ಒಳಗೆ ಇದ್ದರೆ ಉಚಿತ ಕೊಡಬೇಕು. ಇಂದು ಸಿಎಂ ಮಾತಿನಲ್ಲಿ ಬಹಳ ವ್ಯತ್ಯಾಸ ಇದೆ. ಅಂದರೆ 200 ಯೂನಿಟ್ ಫ್ರೀ ಅಲ್ಲ ಸಾಮಾನ್ಯ ಜನ 75-80 ಯೂನಿಟ್ ಅಷ್ಟೇ ಬಳಸುತ್ತಾರೆ ಅಂತಾ ಗೊತ್ತಿದ್ದರೂ 200 ಯೂನಿಟ್ ಫ್ರೀ ಅಂತಾ ಹೇಳಿ ಯಾಮಾರಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಬೊಮ್ಮಾಯಿ ಕಿಡಿಕಾರಿದರು. ಈ ರೀತಿ ಹೇಳಿ ಗ್ಯಾರಂಟಿಯಲ್ಲಿ ದೋಖಾ ಮಾಡುತ್ತಾ ಇದ್ದಾರೆ ಅನ್ನೋದು ಸ್ಪಷ್ಟವಾಗಿ ಬೆಳಕಿಗೆ ಬಂದಿದೆ.
ಅನ್ನಭಾಗ್ಯದಲ್ಲಿ ಹೆಚ್ಚುವರಿ ಕೊಡುವುದು ಬರೀ 5 ಕೆಜಿ ಮಾತ್ರ. ರಾಜ್ಯಕ್ಕೆ 5 ಕೆಜಿ ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆಯಡಿ ಉಚಿತ ಕೊಡುತ್ತಿದೆ. ಇಂದು ರಾಜ್ಯದಲ್ಲಿ 5 ಕೆಜಿ ಅಕ್ಕಿ ಜೊತೆಗೆ 1 ಕೆಜಿ ರಾಗಿ, ಜೋಳ ಕೊಡಲಾಗುತ್ತದೆ 10 ಕೆಜಿಯಲ್ಲಿ ಅಕ್ಕಿ ಜೊತೆ ರಾಗಿ, ಜೋಳ ಇದೆಯೋ ಇಲ್ಲವೋ ಎಂಬುದು ಸ್ಪಷ್ಟ ಆಗಿಲ್ಲ ಎಂದು ಗ್ಯಾರಂಟಿ ಷರತ್ತುಗಳನ್ನು ಬೊಮ್ಮಾಯಿ ಟೀಕಿಸಿದರು