ಬೆಂಗಳೂರು: ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಬದ್ಧ ಎಂದು ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಜತೆಗೆ ಪರಿಶುದ್ಧ ಆಡಳಿತ ನೀಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಅದೇ ಕಿವಿಮಾತು ಹೇಳಿದ್ದಾರೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದರು. ರಾಜ್ಯದ ಶಾಂತಿ, ಸುವ್ಯವಸ್ಥೆ ಕದಡುವ ಯಾವುದೇ ವ್ಯಕ್ತಿ, ಸಂಘಸಂಸ್ಥೆಗಳ ವಿರುದ್ಧ ಕಾನೂನು ಪ್ರಕಾರ ಕ್ರಮವಹಿಸಲಾಗುವುದು. ಪಕ್ಷದ ಚುನಾವಣಾ ಪ್ರಣಾಳಿಕೆ ಸ್ಪಷ್ಟವಾಗಿದೆ. ಶಾಂತಿ, ಸುವ್ಯವಸ್ಥೆಗೆ ಭಂಗ ತರುವವರು, ಬಜರಂಗದಳವು ಸೇರಿ ಕಾನೂನು ಕ್ರಮವಹಿಸಲಾಗುತ್ತದೆ ಅಂತಹ ಸಂಘಟನೆಗಳನ್ನು ನಿಷೇಧಿಸುವ ವಿಷಯವೂ ಪ್ರಸ್ತಾಪಿಸಿದ್ದು, ರಾಜ್ಯದಲ್ಲಿ ಅಂತಹ ಪ್ರಮೇಯ ಬರಲಾರದು ಎಂಬ ವಿಶ್ವಾಸವಿದೆ. ಬರಬಾರದು ಎಂದು ಆಶಿಸುವುದಾಗಿ ಪರಮೇಶ್ವರ್ ಹೇಳಿದರು.
ಪಿಎಸ್ಐ ನೇಮಕ ಅಕ್ರಮ ಪ್ರಕರಣವು ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿದ್ದು, ಅಗತ್ಯ ಕಾನೂನು ಕ್ರಮಗಳ ಕುರಿತು ಅಡ್ವೋಕೇಟ್ ಜನರಲ್ ಜತೆಗೆ ಚರ್ಚಿಸಲಾಗುವುದು. ಜತೆಗೆ ತಪ್ಪಿತಸ್ಥರ ವಿರುದ್ಧ ತಕ್ಕ ಕಾನೂನು ಕ್ರಮವಾಗುವಂತೆ ನೋಡಿಕೊಳ್ಳಲು ಸರ್ಕಾರ ಬದ್ಧವೆಂದು ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.