ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ತಂತ್ರಗಾರಿಕೆ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಗೆಲುವಿನ ಗದ್ದುಗೆ ಏರಿದ ಕಾಂಗ್ರೆಸ್ ಈಗ ಮತ್ತೊಂದು ಕಾರ್ಯತಂತ್ರಕ್ಕೆ ಮುಂದಾಗಿದೆ. ಸೋತ ಅಭ್ಯರ್ಥಿ ಜಗದೀಶ್ ಶೆಟ್ಟರ್ ರನ್ನು ಮತ್ತೊಂದು ಅಂಗಳಕ್ಕೆ ಅಣಿ ಮಾಡಲು ನಿರ್ಧಾರ ಮಾಡಿದೆ.
ಹೌದು.. ಬಿಜೆಪಿ ಟಿಕೆಟ್ ತಪ್ಪಿದ ತಕ್ಷಣ ಕಾಂಗ್ರೆಸ್ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಿಷ್ಯ ಮಹೇಶ ಟೆಂಗಿನಕಾಯಿ ವಿರುದ್ಧ ಸೋಲುಂಡಿದ್ದಾರೆ. ಇದು ನನ್ನ ಕೊನೆಯ ಚುನಾವಣೆ ಎಂದಿದ್ದ ಶೆಟ್ಟರ್, ನನಗಿನ್ನೂ ವಯಸ್ಸಾಗಿಲ್ಲ ಎನ್ನುವ ಮೂಲಕ ಮುಂದಿನ ರಾಜಕೀಯ ನಡೆಯ ಬಗ್ಗೆ ಕುತೂಹಲ ಮೂಡಿಸಿದ್ದಾರೆ.
ಈತನ್ಮಧ್ಯೆ ಈಗ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕೆ ಇಳಿಸಲು ತೆರೆಮರೆಯ ಕಸರತ್ತು ನಡೆಸಿದೆ ಎನ್ನಲಾಗುತ್ತಿದೆ.
ಇನ್ನೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಪಲ್ಲಾದ ಜೋಶಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಆಗಬಹುದೇ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮೂಲೆಗಟ್ಟುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್, ಸಂತೋಷ್ ಎಂದು ಶೆಟ್ಟರ್ ನೇರ ಆರೋಪ ಮಾಡಿದ್ದರು.
ಇದನ್ನೇ ರಾಜಕೀಯ ದಾಳವಾಗಿ ಕಾಂಗ್ರೆಸ್ ತೆಗೆದುಕೊಂಡರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೋಶಿಗೆ ಎದುರಾಳಿಯನ್ನಾಗಿ ಜಗದೀಶ ಶೆಟ್ಟರ್ ಅವರನ್ನು ನಿಲ್ಲಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಹ್ಲಾದ ಜೋಶಿ ವಿರುದ್ಧ ವಿನಯ ಕುಲಕರ್ಣಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿತ್ತು. ಆದರೆ, ವಿನಯಗೆ ಗೆಲುವು ಸಾಧಿಸಲಾಗಿರಲಿಲ್ಲ. ಜೋಶಿ ಅವರನ್ನು ಗೆಲ್ಲಿಸುವಲ್ಲಿ ಜಗದೀಶ ಶೆಟ್ಟರ್ ಅವರ ಕೊಡುಗೆ ಇತ್ತು ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಶೆಟ್ಟರ್ ಹಾಗೂ ಜೋಶಿ ಎದುರಾಳಿಗಳಾದರೂ ಅಚ್ಚರಿ ಪಡಬೇಕಿಲ್ಲ.
ಜಗದೀಶ್ ಶೆಟ್ಟರನ್ನು ಸೋಲಿಸುವುದು ಬಿಜೆಪಿಗೆ ಪ್ರತಿಷ್ಠೆಯಾಗಿದ್ದ ಹಿನ್ನೆಲೆ, ರಾಷ್ಟ್ರೀಯ ನಾಯಕರು ಕ್ಷೇತ್ರಕ್ಕೆ ಸಾಕಷ್ಟು ಬಾರಿ ಭೇಟಿ ನೀಡುತ್ತಿದ್ದರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಘಟಾನುಘಟಿ ನಾಯಕರು ಕ್ಷೇತ್ರಕ್ಕೆ ಬಂದು ಮಹೇಶ್ ಟೆಂಗಿನಕಾಯಿ ಪರವಾಗಿ ಪರವಾಗಿ ರ್ಯಾಲಿ ರೋಡ್ ಶೋಗಳನ್ನು ನಡೆಸಿ ಮತಯಾಚಿಸಿದ್ದರು. ಬಿಜೆಪಿ ನಿರೀಕ್ಷೆಯಂತೆ ಜಗದೀಶ್ ಶೆಟ್ಟರ್ ಸೋಲಪ್ಪಿದ್ದಾರೆ. ಇದೀಗ ಹೊಸ ವೇದಿಕೆ ಸೃಷ್ಟಿಯಾಗುತ್ತಿರುವ ಬಗ್ಗೆ ಚರ್ಚೆಯಾಗುತ್ತಿದ್ದು, ಲೋಕಸಭೆಗೆ ಪ್ರತಿನಿಧಿಸುತ್ತಾರಾ ಎಂಬ ಮಾತುಗಳು ಕೇಳಿಬರುತ್ತಿವೆ.