ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಆಗಾಗ ತಮ್ಮ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ತಮ್ಮದೇ ಧಾಟಿಯಲ್ಲಿ ಉತ್ತರಿಸಿ ಸುದ್ದಿಯಾಗುತ್ತಲೇ ಇದ್ದಾರೆ. ಭಾರತ್ ಜೋಡೋ ಯಾತ್ರೆ ವೇಳೆಯೂ ರಾಗಾಗೆ ಹಲವು ಬಾರಿ ಸಂದರ್ಶನಗಳಲ್ಲಿ ತಮ್ಮ ಮದುವೆ (Marriage) ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದಕ್ಕೆ ಅವರು ಭಿನ್ನವಾಗಿ ಉತ್ತರಗಳನ್ನು ನೀಡಿದ್ದರು. ಆದರೆ ಇದೀಗ ರಾಹುಲ್ ಮಕ್ಕಳನ್ನು (Children) ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
52 ವರ್ಷದ ರಾಹುಲ್ ಗಾಂಧಿ ಇಟಾಲಿಯನ್ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಕ್ಕಳನ್ನು ಹೊಂದಲು ಬಯಸಿರುವುದನ್ನು ಬಹಿರಂಗಪಡಿಸಿದ್ದಾರೆ. ಮಾತ್ರವಲ್ಲದೇ ತಮ್ಮ ಕುಟುಂಬದ ಸದಸ್ಯರು ಹಾಗೂ ಅವರೊಂದಿಗೆ ಇದ್ದ ಅನ್ಯೋನ್ಯ ಸಂಬಂಧಗಳ ಬಗ್ಗೆ ರಾಗಾ ಮನಬಿಚ್ಚಿ ಮಾತನಾಡಿದ್ದಾರೆ.
ಸಂದರ್ಶನದಲ್ಲಿ ಕಾಂಗ್ರೆಸ್ ನಾಯಕ ಮದುವೆಯಾಗುವ ಹಾಗೂ ಮಕ್ಕಳನ್ನು ಹೊಂದುವ ಆಲೋಚನೆ ತಮ್ಮ ಮನಸ್ಸಿಗೆ ಬಂದಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಅದು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ರಾಗಾ 52ರ ವಯಸ್ಸಿನಲ್ಲೂ ಏಕೆ ಒಂಟಿಯಾಗಿದ್ದೀರಿ ಎಂದು ಕೇಳಲಾದ ಪ್ರಶ್ನೆಗೆ, ಇದು ನನಗೂ ವಿಚಿತ್ರ ಎನಿಸುತ್ತದೆ. ಇದಕ್ಕೆ ಉತ್ತರ ನನಗೂ ಗೊತ್ತಿಲ್ಲ. ಮಾಡಲು ತುಂಬಾ ಕೆಲಸಗಳಿವೆ. ಆದರೆ ನಾನು ಮಕ್ಕಳನ್ನು ಹೊಂದಲು ಬಯಸುತ್ತೇನೆ ಎಂದಿದ್ದಾರೆ.