ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರಾದ ಜಮೀರ್ ಅಹ್ಮದ್ಖಾನ್ ಮತ್ತು ಕೃಷ್ಣಬೈರೇಗೌಡ ಖಾಸಗೀ ವಿಮಾನಯಾನದಲ್ಲಿ ದೆಹಲಿಗೆ ಹೋಗಿಬಂದ ವಿಚಾರ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಬರಗಾಲ ತಾಂಡವವಾಡ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷದ ಪ್ರಮುಖರು ಐಶಾರಾಮಿ ಪ್ರಯಾಣದ ನೆಪದಲ್ಲಿ ಮೋಜು ಮಸ್ತಿ ಬೇಕಿತ್ತಾ ಎಂದು ವಿಪಕ್ಷ ಬಿಜೆಪಿ ಆಕ್ರೋಶ ಹೊರಹಾಕ್ತಿದೆ. ಇದು ಆಡಳಿತ ಹಾಗೂ ವಿಪಕ್ಷದ ನಡುವೆ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ….
ರಾಜ್ಯದಲ್ಲಿ ಬರ ತಾಂಡವವಾಡ್ತಿದೆ ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಬರಬೇಕಾದ ಪರಿಹಾರವನ್ನು ಕೇಳಲು ಸಿಎಂ ಸಿದ್ದರಾಮಯ್ಯ, ಸಚಿವರಾದ ಜಮೀರ್ ಅಹ್ಮದ್ ಖಾನ್, ಕೃಷ್ಣಬೈರೇಗೌಡ ಸೇರಿದಂತೆ ಪ್ರಮುಖ ನಾಯಕರು ದೆಹಲಿಗೆ ಹೋಗಿ ಪ್ರಧಾನಿ ಮೋದಿಯವರನ್ನ ಭೇಟಿ ಮಾಡಿ ಬಂದಿದ್ದಾರೆ. ಇವರೆಲ್ಲಾ ದೆಹಲಿಗೆ ಹೋಗಿಬಂದ ಪ್ರೈವೇಟ್ ಜೆಟ್ ನ ಐಶಾರಾಮಿ ವಿಡಿಯೋವನ್ನ ಸಚಿವ ಜಮೀರ್ ಅಹ್ಮದ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ, ಇದೇ ವಿಚಾರ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು ಇಂತಹ ಸಂಕಷ್ಟದ ಸಮಯದಲ್ಲಿ ಈ ಮೋಜು ಮಸ್ತಿ ಬೇಕಿತ್ತಾ ಅಂತ ವಿಪಕ್ಷ ಬಿಜೆಪಿ ಕೆರಳಿ ಕೆಂಡವಾಗಿದೆ…
ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಸಿಎಂ ಸಿದ್ದರಾಮಯ್ಯ ಅವರು ಐಷಾರಾಮಿ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ವಿರೋಧ ಪಕ್ಷ ಬಿಜೆಪಿ ಅದನ್ನ ತನ್ನ ಪ್ರಚಾರದ ಭಾಗವನ್ನಾಗಿಸಿಕೊಂಡಿದೆ. ಇದೇ ವಿಚಾರ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿರುವ ಬಿಜೆಪಿ ಬರಗಾಲದ ಕಾಲದಲ್ಲಿ ಇಂತ ಶೋಕಿ ಬೇಕೆ ಎಂದು ಪ್ರಶ್ನಿಸಿದೆ. ಟ್ವಿಟ್ ಮೂಲಕ ಸಿಎಂ ನಡೆ ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಡುಗು ಮುಳುಗುವ ವೇಳೆ ನೀರೋ ಪಿಟೀಲ್ ಬಾರಿಸುತ್ತಿದ್ನಂತೆ ಅಂತ ರೋಮ್ ದೊರೆಯ ಐಶಾರಾಮಿತನಕ್ಕೆ ಹೋಲಿಸಿ ವ್ಯಂಗ್ಯವಾಡಿದ್ದಾರೆ….
ಮತ್ತೊಂದೆಡೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸಹ ಕೆರಳಿ ಕೆಂಡವಾಗಿದ್ದಾರೆ, ರಾಜ್ಯದಲ್ಲಿ ಬರ ಆವರಿಸಿ ಜನರು ಸಂಕಷ್ಟದಲ್ಲಿದ್ದಾರೆ. ನೀವು ಮಾತ್ರ ಜೆಟ್ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದೀರಿ. ಸಿದ್ಧರಾಮಯ್ಯನವರೇ ಬರದ ನಡುವೆ ಈ ದೌಲತ್ತು ಬೇಕಿತ್ತಾ. ಒಂದು ಕಡೆ ಮಕ್ಕಳು ಜೆಸಿಬಿಯಲ್ಲಿ ಹೋಗ್ತಾರೆ ಮತ್ತೊಂದು ಕಡೆ ಸಿದ್ಧರಾಮಯ್ಯ ಜೆಟ್ ನಲ್ಲಿ ಹೋಗ್ತಾರೆ. ಇದು ಬೇಕಾಗಿತ್ತಾ ಇವರಿಗೆ. ಸಿದ್ಧರಾಮಯ್ಯನವರು ನಾವು ಸಮಾಜವಾದಿ ಸಮಾಜವಾದಿ ಅಂತ ಹೇಳ್ತಾರೆ. ಇದೇನಾ ನಿಮ್ಮ ಸಮಾಜವಾದಿ ಧೋರಣೆ ಎಂದು ಕಿಡಿಕಾರಿದ್ರು ಅಶೋಕ್.
ತಮ್ಮ ವಿರುದ್ದ ವಿಪಕ್ಷಗಳು ಮಾಡಿರುವ ಆರೋಪಕ್ಕೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯಾವ ವಿಮಾನದಲ್ಲಿ ಓಡಾಡುತ್ತಾರೆ, ಅವರು ಓಡಾಡೋದು ಐಷಾರಾಮಿ ವಿಮಾನ ಅಲ್ಲವೇ ದೇಶದಲ್ಲಿ ಯಾವುದೇ ಸ್ಥಿತಿ ಇದ್ದರೂ ಮೋದಿ ಓಡಾಡುವ ಫ್ಲೈಟ್ ಎಂಥದ್ದು ಮೊದಲು ಅದನ್ನು ಬಿಜೆಪಿಯವರಿಗೆ ಕೇಳಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು…
ಇನ್ನು ಸಿಎಂ ಬೆಂಬಲಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಹ ನಿಂತಿದ್ದು ನಾವೇನು ಐಷಾರಾಮಿ ಪ್ಲೇನ್ನಲ್ಲಿ ಶಾಸಕರನ್ನ ಕರದುಕೊಂಡು ಮುಂಬೈಗೆ ಹೋಗಿ ಯಾರನದನೋ ಸಿಎಂ ಮಾಡಿಲ್ವಲ್ಲ. ಮುಖ್ಯಮಂತ್ರಿಗಳು ಆ ರೀತಿ ಬಳಸಿಲ್ವಲ್ಲಾ, ಟೈಮ್ ಕಾರಣಕ್ಕಾಗಿ ಪ್ರೈವೇಟ್ ವಿಮಾನವನ್ನು ಬಳಸಿರಬಹುದು, ನಾವು ಬೆಳಗಾವಿಯಿಂದ ಟಿಕೆಟ್ ಸಿಗಲಿಲ್ಲ ಅಂತ ಬೇರೆ ವಿಮಾನದಲ್ಲಿ 17, 18 ಜನ ಶಾಸಕರು ಬಂದಿದ್ವಿ ಅದರಲ್ಲಿ ಏನು ತಪ್ಪು ಅಂತ ಕೆಂಡ ಕಾರಿದ್ದಾರೆ….
ಒಟ್ನಲ್ಲಿ ಸಿಎಂ ಹಾಗೂ ತಮ್ಮ ನಡುವಿನ ಆತ್ಮೀಯತೆ ಪ್ರದರ್ಶನ ಮಾಡಲು ಹೋಗಿ ವಿಮಾನ ಪ್ರಯಾಣದ ಪೋಟೋ ಹಂಚಿಕೊಂಡ ಸಚಿವ ಜಮೀರ್ ಖಾನ್ ಪ್ರಚಾರದ ಗಿಮಿಕ್ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿ ಬರಗಾಲದ ಸಮಯದಲ್ಲಿ ವಿಪಕ್ಷಗಳಿಗೆ ಆಹಾರವಾಗಿದೆ. ಈ ವಿಚಾರ ಕಾಂಗ್ರೆಸ್ ಗೆ ಯಾವ ರೀತಿ ಡ್ಯಾಮೇಜ್ ಮಾಡಿ ಬಿಜೆಪಿಗೆ ಎಷ್ಟರ ಮಟ್ಟಿಗೆ ವರ್ಕೋಟ್ ಆಗುತ್ತೆ ಎಂಬುದನ್ನು ಕಾದುನೋಡಬೇಕಿದೆ…