ಬೆಂಗಳೂರು: ಸಂಸತ್ ಭವನ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಇವತ್ತು ಆದಿವಾಸಿ ಮಹಿಳೆ ಎಂಬ ಕಾರಣಕ್ಕೆ ಮಾನ್ಯ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಅದೇ ಆದಿವಾಸಿ ಮಹಿಳೆ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಆಗಿದ್ದಾಗ ಕಾಂಗ್ರೆಸ್ ನಾಯಕ ಯಶವಂತ ಸಿನ್ಹಾ ಅವರನ್ನು ಅಭ್ಯರ್ಥಿ ಮಾಡಿದ್ದು ಯಾಕೆ ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದರು.
ರಾಷ್ಟ್ರಪತಿ ಆಮಂತ್ರಣ ವಿಚಾರವಾಗೇ ಮೇ 28 ರಂದು ಭಾನವಾರ ಸಂಸತ್ ಭವನ ಉದ್ಘಾಟನೆಯ್ನು 21 ಪಕ್ಷಗಳು ಬಹಿಷ್ಕಾರ ಮಾಡಿವೆ. ಅದು ಆಯಾ ಪಕ್ಷದ ನಿಲವು ಆಗಿದೆ. ಸಂಸತ್ ಭವನ ಯಾವುದೋ ಪಕ್ಷದ ಸಂಘಟನೆಗೆ ಸೀಮಿತವಾದ ಭವನ ಅಲ್ಲ. ದೇಶದ ಜನರ ತೆರಿಗೆ ಹಣದಿಂದ ಕಟ್ಟಿರುವ ಭವನ ಅದು ಎಂದು ತಿಳಿಸಿದರು. ಮಾನ್ಯ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಂದ ಉದ್ಘಾಟನೆ ಆಗಬೇಕಿತ್ತು ಅನ್ನುವ ವಿಚಾರ ತೆಗೆದು ಕಾಂಗ್ರೆಸ್ ಬಹಿಷ್ಕಾರ ಮಾಡಲು ಮುಂದಾಗಿದೆ. ಇದೇ ಕಾಂಗ್ರೆಸ್ ಪಕ್ಷ ಛತ್ತೀಸಗಢದಲ್ಲಿ ವಿಧಾನಸಭಾ ಕಟ್ಟಡದ ಉದ್ಘಾಟನೆ ಮಾಡಲು ಸೋನಿಯಾ ಗಾಂಧಿ ಅವರಿಂದ ಅಡಿಗಲ್ಲು ಹಾಕಿಸಿತ್ತು. ಅಲ್ಲಿ ರಾಷ್ಟ್ರಪತಿ ಅವರು ನೆನಪಿಗೆ ಬರಲಿಲ್ಲ ಏಕೆ? ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.