ಧಾರವಾಡ ;– ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಕ್ಕಿ ಆರೋಪ ಮಾಡುತ್ತಿರುವ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತನ್ನ ಕೈಯಲ್ಲಿ ಅಕ್ಕಿ ಕೊಡಲು ಆಗುತ್ತಿಲ್ಲ. ಹೀಗಾಗಿ ಸುಳ್ಳು ಹೇಳುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ತಿಂಗಳಾಯ್ತು, ಇನ್ನೂ ಒಂದು ಕೆಜಿ ಅಕ್ಕಿ ಸಹ ಕೊಟ್ಟಿಲ್ಲ. ಈಗ ಕೊಡುತ್ತಿರುವ 5 ಕೆಜಿ ಅಕ್ಕಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ್ದು. ನ್ಯಾಷನಲ್ ಫುಡ್ ಸೆಕ್ಯೂರಿಟಿ ಆ್ಯಕ್ಟ್ ಅಡಿ ಕೊಡುತ್ತಿದ್ದೇವೆ. ಈ ಆ್ಯಕ್ಟ್ ಮಾಡಿದ್ದು ನಾವು ಅಂತಾ ಅವರು ಹೇಳುತ್ತಾರೆ. ಅವರು ಆ್ಯಕ್ಟ್ ಪಾಸ್ ಮಾಡಿದ್ದರೂ ಹಣ ಇಟ್ಟಿರಲಿಲ್ಲ. ಮೋದಿಯವರು ಬಂದ ನಂತರ ಇದನ್ನು ಶುರು ಮಾಡಿದೇವೆ. 80 ಕೋಟಿ ಜನರಿಗೆ ನಾವು ಉಚಿತವಾಗಿ ಅಕ್ಕಿ ಕೊಡುತ್ತಿದ್ದೇವೆ. ಉಳಿದ 60 ಕೋಟಿ ಜನಸಂಖ್ಯೆಗೆ ಕನಿಷ್ಠ ದರದಲ್ಲಿ ಅಕ್ಕಿ ಕೊಡಬೇಕಾಗುತ್ತದೆ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದರು.
ಇನ್ನೂ ಈಗ ಮೋದಿ ಕೊಡುತ್ತಿರುವ 5ಕೆಜಿ ಬಿಟ್ಟು ಇವರು 10 ಕೆಜಿ ಕೊಡಬೇಕು. ಆದರೆ ಈಗ ಕೇಂದ್ರ ಸರ್ಕಾರದ ಮೇಲೆ ಕ್ಷುಲ್ಲಕ ಆರೋಪ ಮಾಡುತ್ತಿದ್ದಾರೆ. ಎಲ್ಲ ರಾಜ್ಯ ಸರ್ಕಾರಗಳು 10 ಕೆಜಿ ಕೊಡುತ್ತೇವೆ ಎಂದರೆ ಮುಂದೆನು ಎಲ್ಲರಿಗೂ ಕೇಂದ್ರ ಸರ್ಕಾರ ಅಕ್ಕಿ ಕೊಡಲು ಆಗುತ್ತಾ? ಕೆಲ ರಾಜ್ಯಗಳಲ್ಲಿ ಈಗ ಕೊಡುತ್ತಿದ್ದಾರೆ.
ಬಿಜೆಪಿ ಆಡಳಿತ ಇರುವ ರಾಜ್ಯಗಳಿಗೂ ಹೆಚ್ಚುವರಿ ಅಕ್ಕಿ ಕೊಟ್ಟಿಲ್ಲ. ಹೆಚ್ಚುವರಿ ಅಕ್ಕಿ ಆಯಾ ರಾಜ್ಯಗಳು ತಮ್ಮ ವ್ಯವಸ್ಥೆಯಲ್ಲಿ ಕೊಡುತ್ತಿವೆ. ಅದರ ಬಗ್ಗೆ ವಿಚಾರ ಮಾಡದೇ ಘೋಷಣೆ ಮಾಡಿದ್ದಾರೆ. ಈಗ ಕೇಂದ್ರದ ಮೇಲ ಗೂಬೆ ಕೂರಿಸುತ್ತಿದ್ದಾರೆ
ಕುಣಿಯಲು ಬರದವರು ನೆಲ ಡೊಂಕು ಅಂದಂತೆ ಸಿದ್ದರಾಮಯ್ಯ ನೀತಿ ಆಗಿದೆ.
ತಮಗೆ ಹಣಕಾಸಿನ ಹೊಂದಾಣಿಕೆ ಮಾಡಲು ಆಗದೇ ಆರೋಪ ಮಾಡಿದ್ದಾರೆ. ಸೌಜನ್ಯಕ್ಕೂ ಸಹ ರಾಜ್ಯ ಸರ್ಕಾರ 5 ಕೆಜಿ ಕೇಂದ್ರದ್ದು ಎಂದು ಹೇಳುತ್ತಿಲ್ಲ. ಇದು ಇವರ ದುರಂಹಕಾರ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ.
ಇವರು ಬಡವರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ನಾವು ಬಡವರ ಕಲ್ಯಾಣ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ.