ಬೆಂಗಳೂರು: ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ 40% ಸರ್ಕಾರ ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ವಿಡಿಯೋ ಸಾಂಗ್ ಹಂಚಿಕೊಂಡಿದ್ದು, ಹಾಡಿನ ಮೂಲಕ ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿದೆ. ತುಂಬಾ ಹಾಸ್ಯದಿಂದ ಕೂಡಿರುವ ಈ ಹಾಡಿನಲ್ಲಿ ಬಿಜೆಪಿ ಸರ್ಕಾರದ ಹಲವು ಹಗರಣಗಳ ಬಗ್ಗೆ ಉಲ್ಲೇಖಿಸಲಾಗಿದೆ. ೪೦% ಕಮಿಷನ್ ಸರ್ಕಾರ, ಪಿಎಸ್ಐ ಹಗರಣ, ಮೊಟ್ಟೆ ಹಗರಣ, ಬಿಡಿಎ ಹಗರಣ, ಕೋವಿಡ್ ಹಗರಣ ಮತ್ತು ಇತರ ಹಗರಣಗಳ ಬಗ್ಗೆ ಹಾಡಿನಲ್ಲಿ ಪ್ರಸ್ತಾಪಿಸಲಾಗಿದೆ.
ಹ್ಯಾಶ್ಟ್ಯಾಗ್ ಬಳಸಿ ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಹಗರಣ, ಕಮಿಷನ್ ದಂಧೆ, ಕೋಮುವಾದ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ 40% ಬಿಜೆಪಿ ಸರ್ಕಾರದ ಬದಲಾವಣೆಯ ಸಮಯ ಬಂದಿದೆ. ಈ ಕಮಿಷನ್ ಸರ್ಕಾರವನ್ನು ಕಿತ್ತೊಗೆಯಿರಿ. ಜನಪರ ಸರ್ಕಾರಕ್ಕೆ ಅಧಿಕಾರ ನೀಡಿ. ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ’ ಎಂದು ಹೇಳಿದೆ.
ಗುತ್ತಿಗೆಗಳಲ್ಲಿ ಕಮಿಷನ್, ಬಿಬಿಎಂಪಿ ಟೆಂಡರ್ಗಳಲ್ಲಿ ಕಮಿಷನ್, ಮೊಟ್ಟೆ ಹಗರಣ, 545 ಪಿಎಸ್ಐ ಹುದ್ದೆಗಳ ನೇಮಕಾತಿ ಹಗರಣ, ಶಿಕ್ಷಕರ ನೇಮಕಾತಿ ಹಗರಣ, ಕೋವಿಡ್ ಹಗರಣ, ಕೆಎಸ್ಡಿಎಲ್ ಟೆಂಡರ್ಗಳಲ್ಲಿ ಕಮಿಷನ್, ಬಿಟ್ಕಾಯಿನ್ ಹಗರಣ, ಬಿಡಿಎ ನಿರ್ಮಾಣಗಳಲ್ಲಿ ಹಗರಣ ಮುಂತಾದ ಹಗರಣಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್, ಇನ್ನು ಎಷ್ಟು ದಿನ ಅಂತಾ ಈ 40% ಸರ್ಕಾರವನ್ನು ಬೆಂಬಲಿಸುತ್ತೀರಿ, ಕಿತ್ತೋಗೆಯಿರಿ’ ಅಂತಾ ಟೀಕಿಸಿದೆ.