ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕನಕಪುರ ಬಂಡೇ ಎಂದೇ ಪ್ರಖ್ಯಾತರಾಗಿರುವ ಡಿಕೆ ಶಿವಕುಮಾರ್ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕೆಪಿಸಿಸಿ ಚುಕ್ಕಾಣಿ ವಹಿಸಿಕೊಂಡವರು. ಅನೇಕ ಎಡರು ತೊಡರುಗಳ ನಡುವೆಯೇ ಇಂದು ಪಕ್ಷವನ್ನು ಗೆಲುವಿನ ದಡ ಸೇರಿಸಿರುವ ಅವರಿಗೆ ಇದೀಗ ಸಿಎಂ ಪಟ್ಟ ಒಲಿದು ಬಂದಿದೆ.
ಡಿಕೆ ಶಿವಕುಮಾರ್ ಅವರು ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಈ ಹಂತದಲ್ಲಿ ಅವರ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿತು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದೆ ಮುನ್ನುಗ್ಗುವ ಅವರ ಗುಣವೇ ಈ ನಿರ್ಧಾರಕ್ಕೆ ಕಾರಣ. ಮೈತ್ರಿ ಸರಕಾರದ ಅವಧಿಯಲ್ಲಿ ಸರಕಾರವನ್ನು ಉಳಿಸಲು ಅವರು ಮಾಡಿದ್ದ ಪ್ರಯತ್ನ ಸಹ ಹೈಕಮಾಂಡ್ ಗಮನ ಸೆಳೆದಿತ್ತು.
ಕನಕಪುರದಿಂದ 8ನೇ ಬಾರಿಗೆ ದಾಖಲೆ ಮತಗಳ ಅಂತರದಿಂದ ಶಾಸಕರಾಗಿ ಆಯ್ಕೆಯಾಗಿರುವ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ಆದ ವರ್ಚಸ್ಸು ಇದೆ. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಸಂಘಟಿಸಿ, ಕಾರ್ಯಕರ್ತರನ್ನು ಸಜ್ಜುಗೊಳಿಸಿ, ಚುನಾವಣಾ ರಣತಂತ್ರಗಳನ್ನು ರೂಪಿಸಿ ಇದೀಗ ಸಂಪೂರ್ಣ ಯಶಸ್ವಿಯಾಗಿದ್ದಾರೆ.
ಬಹುತೇಕ ಬೆಂಗಳೂರಿನಲ್ಲೇ ಶಿಕ್ಷಣ
ಡಿಕೆ ಶಿವಕುಮಾರ್ ಅವರು, ಬೆಂಗಳೂರಿನ ವಿದ್ಯಾವರ್ಧಕ ಸಂಘದಲ್ಲಿ ಎಸ್ ಎಸ್ ಎಲ್ ಸಿ, ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿಯಲ್ಲಿ ಪಿಯುಸಿ ವ್ಯಾಸಂಗ ಮಾಡಿದರು. ಬಳಿಕ ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ ಬಿಎ ಮುಗಿಸಿದರು. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂಎ ಸಹ ಪಡೆದಿದ್ದಾರೆ.
ಕಾಲೇಜು ದಿನಗಳಿಂದ ರಾಜಕೀಯ
ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಎನ್ ಎಸ್ ಯುಐ ಮೂಲಕ ರಾಜಕೀಯವಾಗಿ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿದ್ದ ಡಿಕೆ ಶಿವಕುಮಾರ್ ಅವರು, 1985 ಮೊದಲ ಬಾರಿಗೆ ಸಾತನೂರು ವಿಧಾನ ಸಭಾ ಕ್ಷೇತ್ರದಲ್ಲಿ ಜನತಾ ದಳದ ಎಚ್. ಡಿ. ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿ ಸೋಲು ಅನುಭವಿಸಿದರು. ಬಳಿಕ 1987 ಸಾತನೂರಿನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದರು.
1989ರಲ್ಲಿ ಸಾತನೂರು ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 1991ರಲ್ಲಿ ಸಾರೆಕೊಪ್ಪ ಬಂಗಾರಪ್ಪ ಅವರ ಸಂಪುಟದಲ್ಲಿ ಬಂದೀಖಾನೆ ಖಾತೆ ಸಚಿವರಾದರು. 1994ರಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸಾತನೂರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದರು. 1999 ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಮರು ಆಯ್ಕೆಯಾದ ಅವರು, ಎಸ್. ಎಂ. ಕೃಷ್ಣ ಅವರ ಸಂಪುಟದಲ್ಲಿ ಸಹಕಾರ ಖಾತೆ ಸಚಿವರಾಗಿ ಬಳಿಕ ನಗರಾಭಿವೃದ್ಧಿ ಖಾತೆಯನ್ನು ನಿಭಾಯಿಸಿದರು.
2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಕನಕಪುರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿರು. 2013ರ ಚುನಾವಣೆಯಲ್ಲಿ ಗೆದ್ದು ಸಿದ್ದರಾಮಯ್ಯ ಸಂಪುಟದಲ್ಲಿ ಇಂಧನ ಖಾತೆ ಸಚಿವರಾದರು. 2018ರ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. 2020 ಮಾರ್ಚ್ 11ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕವಾದರು.
ವಿವಾದಗಳು
ಡಿಕೆ ಶಿವಕುಮಾರ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಅವರ ರಾಜಕೀಯ ಜೀವನದಲ್ಲಿ ಬಹುದೊಡ್ಡ ಹಿನ್ನಡೆಯಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಅವರು ತಿಹಾರ್ ನಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಯಿತು. ಈಗಲೂ ಅವರ ವಿರುದ್ಧ ಹಲವು ಪ್ರಕರಣಗಳಿವೆ