ಬಾಗಲಕೋಟೆ: ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿವೆ. ಸದ್ಯಕ್ಕೆ ಬಾದಾಮಿ (Badami) ಹೈವೋಲ್ಟೇಜ್ ಕ್ಷೇತ್ರವಾಗಿದ್ದರೂ, ತೇರದಾಳ ಕೂಡ ಹೈವೋಲ್ಟೇಜ್ ಕ್ಷೇತ್ರವಾಗಿ ಬದಲಾಗುತ್ತಿದೆ. ತೇರದಾಳ ಕ್ಷೇತ್ರಕ್ಕೆ ಬಹಳ ಹಳೆಯ ರಾಜಕೀಯ ಇತಿಹಾಸವಿಲ್ಲ. ಈ ಕ್ಷೇತ್ರ ಉಗಮವಾಗಿದ್ದೇ 2008ರಲ್ಲಿ.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಉದಯವಾದ ವಿಧಾನಸಭಾ ಕ್ಷೇತ್ರ ತೇರದಾಳ. ವಿಂಗಡಣೆಗೂ ಮೊದಲು ಜಮಖಂಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. 2008ರ ಮೊದಲ ಚುನಾವಣೆಯಲ್ಲಿ ಕ್ಷೇತ್ರ ಇಡೀ ರಾಜ್ಯದ ಗಮನವನ್ನು ಸೆಳೆದಿತ್ತು
ತೇರದಾಳ ಕ್ಷೇತ್ರದ ಜನರಿಗೆ ಮೊದಲ ಬಾರಿ ಚುನಾವಣೆ (Election) ಆಗಿದ್ದರಿಂದ ಬಾರಿ ಕುತೂಹಲವನ್ನು ಕೆರಳಿಸಿತ್ತು. ಇನ್ನು 2008ರ ಚುನಾವಣೆಯಲ್ಲಿ ಈ ಕ್ಷೇತ್ರ ಇಷ್ಟು ಕುತೂಹಲಕಾರಿ ಹಾಗೂ ಹೈವೋಲ್ಟೇಜ್ ಕ್ಷೇತ್ರ ಆಗಲೂ ಪ್ರಮುಖ ಕಾರಣ ಚಿತ್ರನಟಿ ಹಿರಿಯ ಕಲಾವಿದೆ ಉಮಾಶ್ರಿಯವರ ಸ್ಪರ್ಧೆ.
ಚಿತ್ರನಟಿಯಾಗಿ ತನ್ನದೇ ಗುರುತು ಮೂಡಿಸಿದ್ದ ಉಮಾಶ್ರಿ ನೇಕಾರ ಸಮುದಾಯದವರೇ ಆಗಿದ್ದರು. ಈ ಕ್ಷೇತ್ರದಲ್ಲಿ ನೇಕಾರರ 40 ಸಾವಿರ ಮತಗಳಿವೆ. ನೇಕಾರರ ಪ್ರಭಾವ ಹೆಚ್ಚಾಗಿರುವ ತೇರದಾಳ (Terdal) ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಅವರು ಮುಂದಾಗಿದ್ದರು.
ಇನ್ನೂ ಮಹಿಳೆ ಎಂಬ ಅನುಕಂಪದೊಂದಿದೆ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಟಿಕೆಟ್ ಪಡೆದು ಅಖಾಡಕ್ಕೆ ಇಳಿದಿದ್ದರು. ಮೊದಲ ಬಾರಿ ಇಷ್ಟೆಲ್ಲ ಪ್ರಭಾವ ಬಿಜೆಪಿ (BJP) ವಿರೋಧಿ ಅಲೆ ಇದ್ದರೂ ಸಹ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸಿದ್ದು ಸವದಿ ವಿರುದ್ಧ ಸೋತಿದ್ದರು. ಭಾರತೀಯ ಸೇನೆಯಲ್ಲಿ ಕೆಲ ವರ್ಷ ಸೇವೆ ಸಲ್ಲಿಸಿ ಬಂದು ರಾಜಕೀಯ ಅಖಾಡಕ್ಕೆ ಇಳಿದು ನೆಲೆ ಕಂಡುಕೊಂಡಿರುವ ಸಿದ್ದು ಸವದಿ. 2008ರ ಮೊದಲು ಜಮಖಂಡಿ ಶಾಸಕರಾಗಿದ್ದರು. ತೇರದಾಳ ಜಮಖಂಡಿ ಕ್ಷೇತ್ರದ ವ್ಯಾಪ್ತಿಯಲ್ಲೇ ಇದ್ದಿದ್ದರಿಂದ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದರು.
ಉಮಾಶ್ರಿ (Umashree) ಅವರಿಗೆ ಕಲೆ, ಮಹಿಳಾ ಅನುಕಂಪ, ಕಾಂಗ್ರೆಸ್ ಕೃಪಾಶೀರ್ವಾದ ವರ್ಚಸ್ಸು ಇದ್ದಾಗಲೂ ಸಿದ್ದು ಸವದಿ (Siddu Savadi) 62,595 ಮತ ಪಡೆದರೆ, ಉಮಾಶ್ರಿ 50,351 ಮತ ಪಡೆದಿದ್ದರು. ಉಮಾಶ್ರಿ ವಿರುದ್ಧ 12,244 ಮತಗಳ ಅಂತರದಿಂದ ಸಿದ್ದು ಸವದಿ ಗೆದ್ದು ಬೀಗಿದ್ದರು.
ಇನ್ನು 2013ರ ಚುನಾವಣೆಯಲ್ಲಿ ಪುನಃ ಸಿದ್ದು ಸವದಿ ಹಾಗೂ ಉಮಾಶ್ರಿ ಮಧ್ಯೆ ನೇರ ಹಣಾಹಣಿ ನಡೆದಿತ್ತು. ಆಗ ಬಿಜೆಪಿ ಸರ್ಕಾರದಲ್ಲಿ ನಡೆದ ಏರುಪೇರುಗಳು, ಬಿ.ಎಸ್.ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದ್ದು, ಶ್ರೀರಾಮುಲು ಬಿಎಸ್ಆರ್ ಪಕ್ಷದ ಪರಿಣಾಮದಿಂದ ಉಮಾಶ್ರಿ, ಸಿದ್ದು ಸವದಿ ವಿರುದ್ಧ ಜಯ ಸಾಧಿಸಿದ್ದರು.
ಉಮಾಶ್ರಿ 70,189 ಮತ ಪಡೆದರೆ ಸಿದ್ದು ಸವದಿ 67,590 ಮತ ಪಡೆದಿದ್ದರು. ಕೇವಲ 2599 ಮತಗಳ ಅಂತರದಿಂದ ಉಮಾಶ್ರಿ ಜಯ ಸಾಧಿಸಿದ್ದರು. ನಂತರ 2018ರಲ್ಲಿ ಪ್ರಧಾನಿ ಮೋದಿ ಹವಾ, ಯಡಿಯೂರಪ್ಪ ಪುನಃ ಬಿಜೆಪಿಗೆ ಬಂದಿದ್ದು, ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಕಾರಣದಿಂದ 2018ರಲ್ಲಿ ತೇರದಾಳ ಕ್ಷೇತ್ರದಲ್ಲಿ ಮತ್ತೆ ಎದುರಾಳಿಯಾಗಿದ್ದ ಉಮಾಶ್ರಿ ಸಿದ್ದು ಸವದಿ ಮಧ್ಯೆ ನೇರ ಹಣಾಹಣಿ ನಡೆದಿತ್ತು. ಆಗ ಸಿದ್ದು ಸವದಿ 87,583 ಮತ ಪಡೆದರೆ, ಉಮಾಶ್ರಿ 66,470 ಮತ ಪಡೆದಿದ್ದರು. 21,113 ಮತಗಳ ಅಂತರದಿಂದ ಸಿದ್ದು ಸವದಿ ಜಯ ಗಳಿಸಿದ್ದರು.
ತೇರದಾಳ ಕ್ಷೇತ್ರದಲ್ಲಿ ನೇಕಾರರು, ಲಿಂಗಾಯತ ಮತದಾರರು ಹೆಚ್ಚಾಗಿದ್ದು ನೇಕಾರರೇ ಇಲ್ಲಿ ಪ್ರಮುಖ ನಿರ್ಣಾಯಕರಾಗಿದ್ದಾರೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ನೇಕಾರ ಹಾಗೂ ಲಿಂಗಾಯತರ ಸಮುದಾಯದವರೇ ಶಾಸಕರಾಗಿದ್ದಾರೆ. ಎರಡು ಬಾರಿ ಲಿಂಗಾಯತ ಪಂಚಮಾಲಿ ಸಮುದಾಯದ ಸಿದ್ದು ಸವದಿ ಶಾಸಕರಾದರೆ. ಒಂದು ಬಾರಿ ನೇಕಾರ ಸಮಾಜದ ಉಮಾಶ್ರಿ ಶಾಸಕಿಯಾಗಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಉಮಾಶ್ರಿ ಸಚಿವೆಯಾಗಿ ಕೂಡ ಕೆಲಸ ಮಾಡಿದ್ದಾರೆ. ಇಂತಹ ಕ್ಷೇತ್ರದಲ್ಲಿ 2023ರ ಚುನಾವಣೆ ಬಾರಿ ಕುತೂಹಲ ಕೆರಳಿಸಿದೆ.
ಉಮಾಶ್ರಿ ವಿರುದ್ಧ ಪರಕೀಯರು ಎಂಬ ವಿರೋಧಿ ಅಲೆ
ಈ ಬಾರಿ ತೇರದಾಳ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಎರಡು ಪಕ್ಷದಲ್ಲಿ ಹೆಚ್ಚಾಗಿದೆ. ಉಮಾಶ್ರಿ ಈ ಭಾಗದವರಾಗದ ಕಾರಣ ಈ ಬಾರಿ ಕಾಂಗ್ರೆಸ್ನಲ್ಲಿ ಎಲ್ಲಾ ಮುಖಂಡರು ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. 16 ಜನರು ತೇರದಾಳ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳಾಗಿದ್ದು, ಟಿಕೆಟ್ಗಾಗಿ ಇನ್ನಿಲ್ಲದ ಪ್ರಯತ್ನ ಶುರು ಮಾಡಿದ್ದಾರೆ. ಉಮಾಶ್ರಿ ಬಿಟ್ಟು ಸ್ಥಳೀಯರಿಗೆ ಟಿಕೆಟ್ ಕೊಟ್ಟರೆ ಮಾತ್ರ ಕಾಂಗ್ರೆಸ್ ಬೆಂಬಲಿಸೋದಾಗಿ ಕಾರ್ಯಕರ್ತರು ನಿಂತಿದ್ದಾರೆ. ಕಾಂಗ್ರೆಸ್ ನಲ್ಲಿ ಪ್ರಮುಖವಾಗಿ ವೈದ್ಯರೇ ಆಕಾಂಕ್ಷಿಗಳಾಗಿದ್ದಾರೆ. ಕಣ್ಣಿನ ವೈದ್ಯ ಡಾ.ಪದ್ಮಜಿತ್ ನಾಡಗೌಡ, ಜೈನ ಸಮುದಾಯಕ್ಕೆ ಸೇರಿದವರು. ಪಂಚಮಸಾಲಿ ಸಮುದಾಯಕ್ಕೆ ಸೇರಿದ ಡಾ.ಎ.ಆರ್ ಬೆಳಗಲಿ, ನೇಕಾರ ಸಮುದಾಯಕ್ಕೆ ಸೇರಿರುವ ಎಮ್.ಎಸ್ ದಡ್ಡೆನವರ ಸೇರಿದಂತೆ 16 ಜನರು ಆಕಾಂಕ್ಷಿಗಳಿದ್ದಾರೆ. ಆದರೆ ಮುಖ್ಯ ರೇಸ್ ನಲ್ಲಿ ಉಮಾಶ್ರಿ, ಪದ್ಮಜಿತ್ ನಾಡಗೌಡ. ಡಾ.ಎ.ಆರ್ ಬೆಳಗಲಿ ಇದ್ದಾರೆ.
ಬಿಜೆಪಿಯಲ್ಲೂ ಕೂಡ ಟಿಕೆಟ್ ಅಸಮಾಧಾನ
ಬಿಜೆಪಿಯಿಂದ 6-7 ಜನರು ಆಕಾಂಕ್ಷಿಗಳಿದ್ದು ಈ ಬಾರಿ ಟಿಕೆಟ್ ಸಿದ್ದು ಸವದಿಗೆ ನೀಡಬಾರದು ಎಂಬ ಕೂಗು ಕೇಳಿ ಬಂದಿದೆ. ಜೊತೆಗೆ ನೇಕಾರ ಸಮುದಾಯಕ್ಕೆ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡುವಂತೆ ಒತ್ತಡ ಬರುತ್ತಿದೆ. ಆದರೆ ಯಡಿಯೂರಪ್ಪ ಬನಹಟ್ಟಿ ವಿಜಯಸಂಕಲ್ಪ ಯಾತ್ರೆಗೆ ಬಂದಾಗ ಸಿದ್ದು ಸವದಿಯನ್ನು ಆರಿಸಿ ಕಳಿಸಿ ಎಂದಿದ್ದರು. ಮರುದಿನ ಬಾಯಿ ತಪ್ಪಿ ಹೇಳಿದ್ದೇನೆ ಎಂದು ಸಮರ್ಥನೆ ಮಾಡಿಕೊಂಡಿದ್ದರು.
ಕ್ಷೇತ್ರದಲ್ಲಿ ನೇಕಾರರು ಹೆಚ್ಚಿನ ಪ್ರಭಾವ ಹೊಂದಿದ ಕಾರಣ ನೇಕಾರರಿಗೆ ಸಾಲ ಸೌಲಭ್ಯ, ನೇಕಾರರ ಅಭಿವೃದ್ಧಿ, ನೇಕಾರರ ಸಾಲ ಮನ್ನಾ, ಮಗ್ಗಗಳಿಗೆ ವಿದ್ಯುತ್ ಎಲ್ಲವೂ ಚುನಾವಣೆಯ ಪ್ರಮುಖ ಅಸ್ತ್ರಗಳಾಗಿರುತ್ತವೆ. ನೇಕಾರ ಕ್ಷೇತ್ರದಲ್ಲಿ ಈ ಬಾರಿ ಆಕಾಂಕ್ಷಿಗಳ ಪಟ್ಟಿ ಎರಡು ಪಕ್ಷದಲ್ಲಿ ಹೆಚ್ಚಾಗಿದೆ. ಇದು ಚುನಾವಣೆಯ ಕುತೂಹಲದ ಕಾವನ್ನು ಹೆಚ್ಚಿಸಿದೆ.