ಕಾಂಗ್ರೆಸ್ ಪಕ್ಷಕ್ಕೆ ಶರತ್ತು ರಹಿತರಾಗಿ ಸೇರುವವರ ಸಂಖ್ಯೆ ಹೆಚ್ಚಾಗಿದೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಶರತ್ತು ರಹಿತರಾಗಿ ಸೇರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಖಾಲಿಯಾಗಿದೆ, ಎಲ್ಲರೂ ಪಕ್ಷ ಬಿಡುತ್ತಿದ್ದಾರೆ ಎಂಬ ಮಾತನ್ನು ಬಿಜೆಪಿಯವರು ಆಡುತ್ತಿದ್ದರು. ಇದೀಗ ಕಾಂಗ್ರೆಸ್ ಪಕ್ಷಕ್ಕೆ ಶರತ್ತು ರಹಿತರಾಗಿ ಸೇರುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಬಳಿ ಬಹುದೊಡ್ಡ ಪಟ್ಟಿಯೇ ಇದ್ದು, ಈಗಲೇ ಎಲ್ಲವನ್ನು ಘೋಷಿಸುವುದಿಲ್ಲ. ಹಾವೇರಿ ಜಿಲ್ಲೆಯ ಎಲ್ಲಾ ನಾಯಕರ ಜೊತೆ ಚರ್ಚಿಸಿದ ಬಳಿಕವೇ ಯು ಬಿ ಬಣಕಾರ್ ಅವರನ್ನು ಕಾಂಗ್ರೆಸ್​ಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಯು ಬಿ ಬಣಕಾರ್ ಜೊತೆ ಹಲವು ಬಿಜೆಪಿ ನಾಯಕರು ಕಾಂಗ್ರೆಸ್​ಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಎಲ್ಲರನ್ನೂ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದೇ ರೀತಿ ಕುಷ್ಠಗಿಯ ಮಾಜಿ ಶಾಸಕರ ಮೊಮ್ಮಗ ಶ್ರೀನಿವಾಸ್ ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು, ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಕೊಪ್ಪಳ ಜಿಲ್ಲೆಯ ನಾಯಕ ಮಲ್ಲಿಕಾರ್ಜುನ ಲೋಣಿ ಸಹ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ಇವರು ಸಹ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ನಾಯಕರ ಸೇರ್ಪಡೆಗೆ ಮುನ್ನ ನಾವು ಸ್ಥಳೀಯ ನಾಯಕರ ಜೊತೆ ಸುದೀರ್ಘವಾಗಿ ಚರ್ಚಿಸಿದ್ದೇವೆ. ಅವರ ಒಪ್ಪಿಗೆ ಬಳಿಕವೇ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಯಾವುದೇ ಶರತು ಇಲ್ಲದೆ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಇವರು ಸೇರ್ಪಡೆ ಆಗುತ್ತಿದ್ದಾರೆ ಎಂದು ಹೇಳಿದರು.