ಭೋಪಾಲ್: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ ಸಂಘಟನೆಯನ್ನು ನಿಷೇಧಿಸುವುದಿಲ್ಲ. ಆದರೆ ಸಂಘಟನೆಯಲ್ಲಿನ ಗೂಂಡಾಗಳು ಹಾಗೂ ಗಲಭೆಕೋರರನ್ನು ಬಿಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ (Digvijaya Singh) ಹೇಳಿದ್ದಾರೆ. ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ (Madhya Pradesh) ಈ ವರ್ಷದ ಅಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದ್ದು,
ಈ ಸಂದರ್ಭದಲ್ಲಿ ದಿಗ್ಬಿಜಯ ಹೇಳಿಕೆ ಮಹತ್ವ ಪಡೆದಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ (Congress Party) ಬಜರಂಗದಳ ನಿಷೇಧಿಸಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿತ್ತು ಎಂಬುದು ಇಲ್ಲಿ ಗಮನಾರ್ಹ. ಸುದ್ದಿಗಾರರ ಜೊತೆ ಮಾತನಾಡಿದ ದಿಗ್ವಿಜಯ್, ಬಜರಂಗದಳ ಗೂಂಡಾಗಳು (Bajarangadal) ಮತ್ತು ಸಮಾಜ ವಿರೋಧಿ ಕೃತ್ಯಗಳನ್ನು ಎಸಗುವ ಜನರ ಗುಂಪು.
ಆದರೆ ಈ ದೇಶ ಎಲ್ಲರಿಗೂ ಸೇರಿದ್ದಾಗಿದೆ. ಹಾಗಾಗಿ ಮೋದಿ ಹಾಗೂ ಶಿವರಾಜ್ (ಮ.ಪ್ರ. ಸಿಎಂ ಶಿವರಾಜ್ ಸಿಂಗ್ ಚೌಹಾಣ್) ಅವರು ದೇಶವನ್ನು ವಿಭಜಿಸುವ ಕೆಲಸವನ್ನು ಬಿಡಬೇಕು ಎಂದು ಹೇಳಿದರು. ಇದೇ ವೇಳೆ ಬಜರಂಗದಳ ನಿಷೇಧದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಸಂಘಟನೆಯನ್ನು ನಿಷೇಧಿಸುವುದಿಲ್ಲ. ಆ ಸಂಘಟನೆಯಲ್ಲಿ ಒಳ್ಳೆಯವರೂ ಇದ್ದಾರೆ. ಆದರೆ ಸಂಘಟನೆಯಲ್ಲಿನ ಗೂಂಡಾಗಳು ಹಾಗೂ ಗಲಭೆಕೋರರನ್ನು ಸುಮ್ಮನೇ ಬಿಡುವುದಿಲ್ಲ ಎಂದರು.