ಮಧ್ಯಪ್ರದೇಶ:- ಬಾಬರಿ ಮಸೀದಿಗಾಗಿ ಹೋರಾಡಿದ ಕಾಂಗ್ರೆಸ್ಸಿಗರು ರಾಮ ಮಂದಿರಕ್ಕೆ ಬರಲಿಲ್ಲ ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.
ಈ ಸಂಬಂಧ ದಾಮೋಹ್ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, ಅನ್ಸಾರಿ ಕುಟುಂಬದ ಎರಡು ತಲೆಮಾರಿನವರು ಬಾಬರಿ ಮಸೀದಿಗಾಗಿ ಹಿಂದೂಗಳ ವಿರುದ್ಧ ನ್ಯಾಯಾಲಯದಲ್ಲಿ ಶತಮಾನಗಳ ಕಾಲ ಹೋರಾಟ ನಡೆಸಿದರು. ಆದರೆ ಸುಪ್ರೀಂ ಕೋರ್ಟ್ ಹಿಂದೂಗಳ ಪರವಾಗಿ ತೀರ್ಪು ನೀಡಿದಾಗ ಅವರು ಸಂತೋಷದಿಂದ ಸ್ವಾಗತಿಸಿದರು. ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು ಆದರೆ ಕಾಂಗ್ರೆಸ್ನ ನಾಯಕರು ಮಾತ್ರ ಆಗಮಿಸಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಶತಮಾನಗಳ ಕಾಲ ಹಿಂದೂಗಳ ವಿರುದ್ಧ ಹೋರಾಟ ಮಾಡಿದ್ದ ಇಕ್ಬಾಲ್ ಅನ್ಸಾರಿ ಮತ್ತು ಅವರ ಕುಟುಂಬಕ್ಕೆ ರಾಮಮಂದಿರ ಟ್ರಸ್ಟ್ನಿಂದ ಆಹ್ವಾನ ನೀಡಲಾಗಿತ್ತು. ಅಷ್ಟೇ ಅಲ್ಲದೆ ಆಹ್ವಾನ ಸ್ವೀಕರಿಸಿದ್ದ ಇಕ್ಬಾಲ್ ಅನ್ಸಾರಿ ಅವರು ರಾಮಮಂದಿರ ಕಾರ್ಯಕ್ರಮಕ್ಕೆ ಸ್ವತಃ ಹಾಜರಾಗಿದ್ದರು. ಆ ಮೂಲಕ ಅವರು ಸುಪ್ರೀಂ ಕೋರ್ಟ್ನ ತೀರ್ಪನ್ನು ಒಪ್ಪಿಕೊಂಡಿದ್ದರು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.
ಇಕ್ಬಾಲ್ ಅನ್ಸಾರಿ ಅವರಿಗೆ ಆಹ್ವಾನ ನೀಡಿದಂತೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಭಾರತ ಮೈತ್ರಿಕೂಟದ ನಾಯಕರಿಗೂ ರಾಮಮಂದಿರ ಟ್ರಸ್ಟ್ನಿಂದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಆಹ್ವಾನ ನೀಡಲಾಗಿತ್ತು. ಜೀವನಪರ್ಯಾಂತ ಬಾಬರಿ ಮಸೀದಿಗಾಗಿ ಹೋರಾಡಿದವರೇ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಕಾಂಗ್ರೆಸ್ನ ನಾಯಕರು ಮಾತ್ರ ಬರಲಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.