ಬೆಂಗಳೂರು: 2032 ರ ವೇಳೆಗೆ ಸಾರ್ವಜನಿಕರಿಗೆ ಪ್ರತಿ 2 ಕಿ.ಮೀ ವ್ಯಾಪ್ತಿಯೊಳಗೆ ಮೆಟ್ರೊ ರೈಲು ಸೇವೆ ಲಭ್ಯವಾಗುವಂತೆ ಮಾಡಲು, ರಾಜ್ಯ ಸರಕಾರ ಹೊಸದಾಗಿ ನಾಲ್ಕು ಮಾರ್ಗಗಳನ್ನು ನಿರ್ಮಿಸಲು ಚಿಂತನೆ ನಡೆಸಿದೆ.
ಮುಂದಿನ 10 ವರ್ಷದೊಳಗೆ ನಾಗರಿಕರಿಗೆ ಅವರ ಕೆಲಸದ ಸ್ಥಳ ಅಥವಾ ವಾಸಿಸುವ ಸ್ಥಳದಿಂದ ಒಂದೆರಡು ಕಿ.ಮೀ ಅಂತರದಲ್ಲಿ ಮೆಟ್ರೊ ರೈಲು ಸೇವೆ ಸಿಗುವಂತೆ ಮಾಡಲು, ನಾಲ್ಕು ಮೆಟ್ರೊ ಮಾರ್ಗಗಳನ್ನು ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸಿದೆ.
ರಾಜ್ಯ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಯೋಜನಾ ಇಲಾಖೆಯಿಂದ ರಚಿತವಾದ ಸಮಿತಿ, ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ ಹಾಗೂ ತಜ್ಞರ ಸಹಯೋಗದಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ. ಪ್ರಸ್ತಾಪಿತ 4 ಹೊಸ ಮೆಟ್ರೊ ಮಾರ್ಗಗಳು ಒಟ್ಟು 59 ಕಿ.ಮೀ ಉದ್ದವಿರಲಿವೆ. ಇದಕ್ಕೆ 27,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಬೆಂಗಳೂರು ಮೆಟ್ರೊ ರೈಲು ನಿಗಮವು 56 ಕಿ.ಮೀ ಮೆಟ್ರೊ ಜಾಲವನ್ನು ಹೊಂದಿದೆ.
ವೈಟ್ಫೀಲ್ಡ್ ಮಾರ್ಗದ ಮೆಟ್ರೊವನ್ನು ಹೊಸಕೋಟೆ (6 ಕಿ.ಮೀ) ಮತ್ತು ಬನ್ನೇರುಘಟ್ಟದಿಂದ ಜಿಗಣಿ (12 ಕಿ.ಮೀ) ವರೆಗೆ ವಿಸ್ತರಿಸಲು ಪ್ರಯತ್ನಿಸಲಾಗಿದೆ. ಹಳೆಯ ವಿಮಾನ ನಿಲ್ದಾಣ ರಸ್ತೆಯ ಮೂಲಕ ಎಂ.ಜಿ ರಸ್ತೆಯಿಂದ ಹೋಪ್ ಫಾರ್ಮ್ ಜಂಕ್ಷನ್ ನಡುವೆ ಹೊಸ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ. ಮಾರತ್ಹಳ್ಳಿ ಮತ್ತು ವೈಟ್ಫೀಲ್ಡ್ (16 ಕಿ.ಮೀ) ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಥಣಿಸಂದ್ರ (25 ಕಿ.ಮೀ) ಮಾರ್ಗ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜೊತೆಗೆ ಆದಾಯವನ್ನು ಹೆಚ್ಚಿಸಲು ಹೊಸೂರು ರಸ್ತೆ, ಮೈಸೂರು ರಸ್ತೆ ಮತ್ತು ಬಳ್ಳಾರಿ ರಸ್ತೆ ಸೇರಿದಂತೆ ಒಂಬತ್ತು ಕಡೆಯಿಂದ ನಗರಕ್ಕೆ ಬರುವ ವಾಹನಗಳಿಗೆ ಪ್ರವೇಶದ ಸ್ಥಳದಲ್ಲಿ ಟೋಲ್ ಶುಲ್ಕ ವಿಧಿಸಬೇಕೆಂಬುದನ್ನೂ ಕ್ರಿಯಾಯೋಜನೆಯಲ್ಲಿ ಉಲ್ಲೇಖಿಸಲಾಗಿದೆ.