ಮಂಡ್ಯ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಕೊನೆ ಹಂತಕ್ಕೆ ಬಂದಿದೆ. ನಿನ್ನೆ ಸಂಜೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆ ಬೀದ್ದಿದೆ. ಮೇ 10 ರಂದು ಮತದಾನ ನಡೆಯಲಿದ್ದು, 13 ರಂದು ಮತ ಎಣಿಕೆ ಆರಂಭವಾಗಲಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವರುಣಾ (Varuna) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಅವರೇ ಘೋಷಿಸಿಕೊಂಡತೆ ಈ ಬಾರಿ ತಮ್ಮ ಕೊನೆ ಚುನಾವಾಣೆಯಾಗಿದ್ದು, ನನ್ನನ್ನು ಗೆಲ್ಲಿಸಿ ಎಂದು ತವರು ಕ್ಷೇತ್ರದ ಜನರಲ್ಲಿ ವಿನಂತಿಸಿಕೊಂಡಿದ್ದಾರೆ.
ಇವರನ್ನು ಸೋಲಿಸಲು ವಿಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಮೇಲಾಗಿ ಬಿಜೆಪಿಯ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಲೇಬೇಕು ಎಂದು ಕಂಕಣ ಕಟ್ಟಿಕೊಂಡಿದ್ದಾರೆ. ಇದರ ಜೊತೆಗೆ ಹೈವೋಲ್ಟೆಜ್ ಕ್ಷೇತ್ರವಾಗಿರುವ ವರುಣಾದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ತಂತ್ರ ರೂಪಿಸಿದ್ದಾರೆ. ಈ ಸಂಬಂಧ ವರುಣಾದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರು. ಅಲ್ಲದೇ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ಕೂಡ ಮೈಸೂರಿನಲ್ಲಿ ವಾಸ್ತವ್ಯ ಹೂಡಿ ಹೊರಗಿನಿಂದಲೇ ತಂತ್ರಗಳನ್ನು ರೂಪಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರನ್ನು ವಿಪಕ್ಷಗಳು ಮಾತ್ರವಲ್ಲದೇ ಸ್ವಪಕ್ಷದವರೇ ಸೋಲಿಸಲು ಹುನ್ನಾರ ರೂಪಿಸುತ್ತಿದ್ದಾರೆಂಬ ಸ್ಪೋಟಕ ಅಂಶವನ್ನು ಸಚಿವ ಡಾ.ಅಶ್ವತ್ಥ್ ನಾರಾಯಣ ಬಹಿರಂಗ ಪಡಿಸಿದ್ದಾರೆ.
ಹೌದು ಈ ಬಗ್ಗೆ ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರನ್ನು ಸೋಲಿಸಲು ಅವರ ಪಕ್ಷದಲ್ಲೇ ಹುನ್ನಾರ ನಡೆದಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಯಾರು ಷಡ್ಯಂತರ ನಡೆಸಿದ್ದಾರೆಂಬುದರ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಆದರೆ ಯಾರು ಕುತಂತ್ರ ನಡೆಸಿದ್ದಾರೆಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಸಿದ್ದರಾಮಯ್ಯ ಅವರು ಸೋಲುವುದನ್ನು ನೋಡಲು ಅವರ ಪಕ್ಷದವರು ಕಾದು ಕುಳಿತಿದ್ದಾರೆ ಎಂದು ಹೇಳಿದರು.ಅವರ ಸೋಲಿಗೆ ಬೇಕಾದ ತಯಾರಿ ಅವರ ನಾಯಕರೇ ಮಾಡುತ್ತಿದ್ದಾರೆ. ಅವರನ್ನು ಸೋಲಿಸಬೇಕು ಅಂತಿರೋದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಸಿದ್ದರಾಮಯ್ಯ ಅವರಿಗೆ ತುಂಬಾ ಆತಂಕ ಇದೆ. ಹೀಗಾಗಿ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬೀಡು ಬಿಟ್ಟಿದ್ದಾರೆ. ಸೂಕ್ಷ್ಮ ವಿಚಾರಗಳನ್ನು ನಾನು ಹೇಳೋದಿಕ್ಕೆ ಆಗಲ್ಲ. ಒಟ್ಟಿನಲ್ಲಿ ಅವರ ಪಕ್ಷದಲ್ಲಿ ಅವರ ಸೋಲಿಗೆ ಕುತಂತ್ರ ನಡೆದಿದೆ. ಸಿದ್ದರಾಮಯ್ಯ ಸೋಲಿಗೆ ಏನೆನ್ನೆಲ್ಲ ಬೇಕೋ ಅದನ್ನೆಲ್ಲ ಅವರ ಪಕ್ಷದವರು ಮಾಡಿದ್ದಾರೆ ಎಂದು ತಿಳಿಸಿದರು.