ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿ ಜೈಲು ಸೇರಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ತಂಡದ ಸದಸ್ಯರು ಮತ್ತೆ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ವರದಿಯಾಗಿದೆ. ಮುಂಬೈನ ಪನ್ವೇಲ್ ಬಳಿಯಲ್ಲಿರುವ ಫಾರ್ಮ್ಹೌಸ್ ಬಳಿಯಲ್ಲಿಯೇ ಸಲ್ಮಾನ್ ಕೊಲೆಗೆ ನಾಲ್ವರು ಎಕೆ-47 ಗನ್ ಹಿಡಿದು ಕಾರ್ನಲ್ಲಿ ಕಾಯುತ್ತಿದ್ದರು. ಈ ಪ್ರಕರಣ ಸಂಬಂಧ ಮಹಾರಾಷ್ಟ್ರ ಪೊಲೀಸರು ಬಿಷ್ಣೋಯ್ ಗ್ಯಾಂಗ್ನ ನಾಲ್ವರು ಶಾರ್ಪ್ ಶೂಟರ್ಗಳನ್ನು ಬಂಧಿಸಿದ್ದಾರೆ.
ಶೂಟರ್ಗಳನ್ನು ಧನಂಜಯ್ಬ ತಪ್ಸಿಂಗ್ ಅಲಿಯಾಸ್ ಅಜಯ್ ಕಶ್ಯಪ್, ಗೌರವ್ ಭಟಿಯಾ ಅಲಿಯಾಸ್ ನ್ಹಾವಿ, ವಾಪ್ಸಿ ಖಾನ್ ಅಲಿಯಾಸ್ ವಾಸೀಂ ಚಿಕ್ನಾ ಮತ್ತು ರಿಜ್ವಾನ್ ಖಾನ್ ಅಲಿಯಾಸ್ ಜಾವೇದ್ ಖಾನ್ ಎಂದು ಗುರುತಿಸಲಾಗಿದೆ. ಪೊಲೀಸರು ಬಂಧಿತದಿಂದ ಎಕೆ-47 ರೈಫಲ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಾಲ್ವರು ಫಾರ್ಮ್ಹೌಸ್ ಬಳಿಯೇ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು. ಇವರು ಅಲ್ಲಿಯೇ ರಿಹರ್ಸಲ್ ನಡೆಸುತ್ತಿದ್ದರು ಎಂದು ವರದಿಯಾಗಿದೆ.
ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್, ಅನ್ಮೋಲ್ ಬಿಷ್ಣೋಯ್, ಗೋಲ್ಡಿ ಬ್ರಾರ್, ಸಂಪತ್ ನೆಹ್ರಾ ಸೇರಿದಂತೆ 17 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇದಕ್ಕೂ ಮುನ್ನ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಮುಂದೆ ಏಪ್ರಿಲ್ 14 ರಂದು ಬೆಳಿಗ್ಗೆ 5 ಗಂಟೆಗೆ ಗುಂಡಿನ ದಾಳಿ ನಡೆದಿತ್ತು. ಎರಡು ಬೈಕ್ಗಳಲ್ಲಿ ಬಂದ ದಾಳಿಕೋರರು ಐದು ಸುತ್ತು ಗುಂಡು ಹಾರಿಸಿದ್ದರು. ಗುಂಡಿನ ದಾಳಿ ವೇಳೆ ಸಲ್ಮಾನ್ ಮನೆಯಲ್ಲಿದ್ದರು. ಘಟನೆಯ ನಂತರ ಸಲ್ಮಾನ್ ಮನೆಯ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಎರಡು ದಿನಗಳ ನಂತರ ಗುಂಡು ಹಾರಿಸಿದ ಆರೋಪಿಗಳಿಬ್ಬರೂ ಸಿಕ್ಕಿಬಿದ್ದರು. ಲಾರೆನ್ಸ್ ಬಿಷ್ಣೋಯ್-ಗೋಲ್ಡಿ ಬ್ರಾರ್ ಗ್ಯಾಂಗ್ನಿಂದ ಖಾನ್ಗೆ ಕೊಲೆ ಬೆದರಿಕೆಗಳು ಬಂದಿದ್ದವು.
ಸಲ್ಮಾನ್ ಖಾನ್ ಹತ್ಯೆ ಬಳಿಕ ಶೂಟರ್ಗಳಿಗೆ ದೊಡ್ಡ ಮೊತ್ತದ ಹಣ ನೀಡುವ ಬಗ್ಗೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಕೆನಡಾದ ಗೋಲ್ಡಿ ಬ್ರಾರ್ ಭರವಸೆ ನೀಡಿತ್ತು ಎಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.