ಮೈಸೂರು: ನಗರದ ಒಳಗೆ ಅಥವಾ ಹೊರಗೆ ಉತ್ತಮ ಜಾಗ ಸಿಕ್ಕರೆ ಒಂದು ಟೌನ್ಶಿಪ್ ನಿರ್ಮಾಣ ಮಾಡಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.
ಎಚ್.ಸಿ. ಮಹದೇವಪ್ಪ ಭರವಸೆ ನೀಡಿದರು. ನಗರದ ಅಶೋಕಪುರಂ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ದೊಡ್ಡ ಗರಡಿ ಸಂಘದಲ್ಲಿ ಆಯೋಜಿಸಿದ್ದ 112ನೇ ವರ್ಷದ ಅಂಬಾ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಶೋಕಪುರಂನಲ್ಲಿ ವಾಸಿಸುತ್ತಿರುವ ಬಡವರಿಗೆ ಮನೆ ನಿರ್ಮಾಣ ಸೇರಿ ಮೂಲ ಸೌಕರ್ಯ ಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದಾಗ ಕಲಬುರಗಿಯಲ್ಲಿ ದಲಿತರಿಗಾಗಿ ಒಂದೇ ಕಡೆಯಲ್ಲಿ 2 ಸಾವಿರ ಮನೆ ನಿರ್ಮಾಣ ಮಾಡುತ್ತಿರುವ ವಿಚಾರವನ್ನು ಹಂಚಿಕೊಂಡರು.
ಅದೇ ರೀತಿ ಮೈಸೂರಿನ ಅಶೋಕಪುರಂನ ಜನರಿಗೂ ಮಾಡುವಂತೆ ಹೇಳಿದರು. ಈ ಬಗ್ಗೆ ಚಿಂತನೆ ನಡೆಸಲಾಗಿದೆ,ಎಂದು ಹೇಳಿದರು. ಅಶೋಕಪುರಂನಲ್ಲಿ ಕೆಲಸಗಳಾಗದೆ ಅಭಿವೃದ್ಧಿ ಕುಂಠಿತವಾಗಿದೆ. ಅಶೋಕಪುರಂನ ಪ್ರಮುಖ ಸಮಸ್ಯೆಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು” ಎಂದು ತಿಳಿಸಿದರು.