ಬೆಂಗಳೂರು;- 2026ರ ಜನಸಂಖ್ಯೆಗೆ ಅನುಗುಣವಾಗಿ ಶೇ.5ರಷ್ಟು ಶೌಚಾಲಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಹೈಕೋರ್ಟ್ಗೆ ಸರ್ಕಾರ ಮಾಹಿತಿ ನೀಡಿದೆ.
ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠಕ್ಕೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಎಂ.ಎನ್.ಅಜಯ್ ನಾಗಭೂಷಣ್ ಈ ಕುರಿತಂತೆ ಪ್ರಮಾಣ ಪತ್ರವನ್ನು ಹೈಕೋರ್ಟ್ಗೆ ಸಲ್ಲಿಸಿದರು.
ರಾಜ್ಯದಲ್ಲಿ ಪ್ರಸ್ತುತ 312 ನಗರ ಸ್ಥಳೀಯ ಸಂಸ್ಥೆಗಳಿವೆ. ಇವುಗಳಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿ ತಲಾ 6 ರಿಂದ 7 ಸೀಟ್ಗಳಂತೆ ಒಟ್ಟು 9,167 ಸೀಟ್ಗಳ ಸಾಮರ್ಥ್ಯದ 1,360 ಸಾರ್ವಜನಿಕ ಶೌಚಾಲಯಗಳಿವೆ. ಅಲ್ಲದೇ ಒಂದು ಬ್ಲಾಕ್ನಲ್ಲಿ ಕನಿಷ್ಠ 4 ಬ್ಲಾಕ್ಗಳನ್ನು ಹೊಂದಿರುವ ಒಟ್ಟು 108 ಮೂತ್ರಾಲಯಗಳಿವೆ. ಕೇಂದ್ರ ಸಾರ್ವಜನಿಕ ಆರೋಗ್ಯ ಪರಿಸರ ಸಂಘಟನೆ ಹಾಗೂ ಸ್ವಚ್ಛ ಭಾರತ್ ಮಿಷನ್ ಮಾರ್ಗಸೂಚಿಗಳಂತೆ ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು ಜನಸಂಖ್ಯೆಯಲ್ಲಿ ಶೇ.5ರಷ್ಟು, ಅಂದರೆ 250 ಮಂದಿಯನ್ನು ಬಂದು ಹೋಗುವ ಜನಸಂಖ್ಯೆ ಎಂದು ಪರಿಗಣಿಸಬೇಕು. ಆ 250 ಜನಸಂಖ್ಯೆಗೆ ಒಂದು ಶೌಚಾಲಯ/ಮೂತ್ರಾಲಯ ಒದಗಿಸಬೇಕು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ 2011ರ ಜನಸಂಖ್ಯೆ ಪ್ರಕಾರ, ರಾಜ್ಯದ ನಗರ ಜನಸಂಖ್ಯೆ 1.57 ಕೋಟಿ ಇದ್ದು, 2026ರಲ್ಲಿ ಈ ಜನಸಂಖ್ಯೆ 2.01 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಶೇ.5ರಂತೆ ಬಂದು ಹೋಗುವ ಜನಸಂಖ್ಯೆ 10 ಲಕ್ಷ ಆಗಲಿದೆ. ಈ ಶೇ.5ರಷ್ಟು ಬಂದು ಹೋಗುವ ಜನಸಂಖ್ಯೆ ಆಧರಿಸಿ ಪ್ರತಿ 250 ಮಂದಿಗೆ ಸಾರ್ವಜನಿಕ ಶೌಚಾಲಯದ ಒಂದು ಸೀಟ್ ಒದಗಿಸಬೇಕಾಗಿದೆ.
ಈ ಶೌಚಾಲಯ, ಮೂತ್ರಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಅ.3ರಂದು ಸುತ್ತೋಲೆ ಹೊರಡಿಸಲಾಗಿದೆ. ಇದಕ್ಕಾಗಿ ಪಾಲಿಕೆ ಆಯುಕ್ತರು, ಮುಖ್ಯಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಮಿತಿ ರಚಿಸುವಂತೆ ಅ.5ರಂದು ಆದೇಶ ಹೊರಡಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.
ಈ ಪ್ರಮಾಣ ಪತ್ರ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿಯಲ್ಲಿ ಕಾನೂನು ಸೇವಾ ಪ್ರಾಧಿಕಾರವನ್ನು ಪ್ರತಿವಾದಿಯನ್ನಾಗಿಸಿತು. ಅಲ್ಲದೇ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ರಾಜ್ಯ ಸರ್ಕಾರದ ಕ್ರಿಯಾ ಯೋಜನೆ ಬಗ್ಗೆ ಸ್ಥಳಕ್ಕೆ ಭೇಟಿ ಕೊಟ್ಟು ಸ್ವತಂತ್ರ ಪರಿಶೀಲನಾ ವರದಿ ಸಲ್ಲಿಸಬೇಕು ಎಂದು ಹೇಳಿದೆ.