ಬೆಂಗಳೂರು:- ನೀರು ಹರಿಯಲು ಅಡ್ಡಿಯಾಗದಂತೆ ರಾಜಕಾಲುವೆ ಮೇಲೆ ಸೇತುವೆ ನಿರ್ಮಿಸಿದರೆ ಒತ್ತುವರಿಯಲ್ಲ ಎಂದು ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ರಾಜಕಾಲುವೆಯ ಮೇಲೆ ಒಂದು ದಡದಿಂದ ಮತ್ತೊಂದು ದಡಕ್ಕೆ ಸೇತುವೆ ನಿರ್ಮಾಣ ಮಾಡಿ, ರಾಜಕಾಲುವೆ ಒಳಭಾಗದಲ್ಲಿ ಯಾವುದೇ ರೀತಿಯ ನಿರ್ಮಾಣ ಮಾಡದೆ, ನೀರು ಸರಾಗವಾಗಿ ಹರಿಯುವುದಕ್ಕೆ ಅಡ್ಡಿಯಾಗದಂತಿದ್ದರೆ, ಅದು ಒತ್ತುವರಿ ಮಾಡಿದಂತೆ ಆಗುವುದಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅಲ್ಲದೆ, ಒತ್ತುವರಿ ಎಂದರೆ ಯಾವುದೇ ಒಬ್ಬ ವ್ಯಕ್ತಿಯೊಬ್ಬರಿಗೆ ಸೇರದ ಆಸ್ತಿಯ ಮೇಲೆ ಒತ್ತಾಯಪೂರ್ವಕ ಹಾಗೂ ಅನಧಿಕೃತವಾಗಿ ಸ್ವಾಧೀನ ಮಾಡಿಕೊಂಡಿರಬೇಕಾಗುತ್ತದೆ. ಜೊತೆಗೆ, ಪ್ರಸ್ತುತ ಅರ್ಜಿಗೆ ಸಂಬಂಧಿಸಿದಂತೆ ಯೋಜನಾ ಪ್ರಾಧಿಕಾರ ಪರಿಶೀಲನೆ ನಡೆಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದಾದರೆ ಒತ್ತುವರಿಯಾಗಿಲ್ಲ ಎಂಬುದಾಗಿ ಅರ್ಥವಾಗಲಿದೆ. ಆದರೆ, ಬಳಿಕ ಖಾಸಗಿ ವ್ಯಕ್ತಿ ನೀಡಿದ ದೂರಿನ ಅನ್ವಯ ಒತ್ತುವರಿ ಆರೋಪದಲ್ಲಿ ಮತ್ತೆ ತಹಶೀಲ್ದಾರರಿಗೆ ಪತ್ರ ಪತ್ರ ಬರೆಯಲು ಪ್ರಾಧಿಕಾರಕ್ಕೆ ಅಧಿಕಾರವಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ಆನೇಕಲ್ ಯೋಜನಾ ಪ್ರಾಧಿಕಾರ ತಹಶೀಲ್ದಾರ್ ಅವರೊಂದಿಗೆ ನಡೆಸಿದ್ದ ಪತ್ರವ್ಯವಹಾರ ಹಾಗು ಒತ್ತುವರಿ ಆರೋಪ ಸಂಬಂಧ ಕಟ್ಟಡದ ಮುಂದೆ ಹಾಕಿದ್ದ ಫಲಕ ತೆರವುಗೊಳಿಸಲು ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.