ಇಸ್ರೇಲ್ ಮತ್ತು ಹಮಾಸ್ ನಡುವಿನ ಈ ಯುದ್ಧದ ಕುರಿತು ಪೋಸ್ಟ್ ಮಾಡಿ ಅರೆಸ್ಟ್ ಆಗಿದ್ದಾರೆ ಖ್ಯಾತ ನಟಿ ಮೈಸಾ ಅಬ್ದೆಲ್ ಹದಿ (Maisa Abdel Hadi). ಇವರು ಅರಬ್-ಇಸ್ರೇಲಿ ನಟಿ. ಈ ಯುದ್ಧಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ರೀತಿಯಲ್ಲಿ ಪೋಸ್ಟ್ ಮಾಡಿದ ಕೆಲವರನ್ನು ಇದಾಗಲೇ ಅರೆಸ್ಟ್ ಮಾಡಲಾಗಿದ್ದು, ಭಯೋತ್ಪಾದನೆಗೆ ಪ್ರಚೋದನೆ ನೀಡುವ ಹೇಳಿಕೆ ಕೊಟ್ಟಿರುವ ಆರೋಪದ ಮೇಲೆ ಮೈಸಾ ಅವರು ಅರೆಸ್ಟ್ ಆಗಿದ್ದಾರೆ.
ಮೈಸಾ ಅದ್ಬೆಲ್ ಹದಿ ಇಸ್ರೇಲ್ನ ನಝರತ್ ನಗರದಲ್ಲಿ ವಾಸಿಸುತ್ತಿದ್ದಾರೆ. ಅವರು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಆ ಫೋಟೋದಲ್ಲಿ ಹಮಾಸ್ ಉಗ್ರರು ಬುಲ್ಡೋಜರ್ ಬಳಸಿ ಇಸ್ರೇಲ್ ಗಡಿಯ ಬೇಲಿಯನ್ನು ಮುರಿದು ನುಗ್ಗುತ್ತಿದ್ದರು. ಇದಕ್ಕೆ ಅವರು ನೀಡಿರುವ ಶೀರ್ಷಿಕೆಯಿಂದ ಅವರು ಅರೆಸ್ಟ್ ಆಗಿದ್ದಾರೆ. ಅವರು ‘ಬರ್ಲಿನ್ ಶೈಲಿಯಲ್ಲಿ ಹೋಗೋಣ’ ಎಂದು ಬರೆದುಕೊಂಡಿದ್ದರು.
ಬರ್ಲಿನ್ ಶೈಲಿಗೂ, ನಟಿಯ ಅರೆಸ್ಟ್ಗೂ ಕಾರಣವೂ ಇದೆ. ಅದೇನೆಂದರೆ, 1989ರ ನವೆಂಬರ್ 9ರಂದು ಲಕ್ಷಾಂತರ ಜನರು ಬರ್ಲಿನ್ ಗೋಡೆಯನ್ನು ನಾಶಪಡಿಸಿದ್ದರು. ಇದೀಗ ಹಮಾಸ್ ಉಗ್ರರೂ, ಇದೇ ರೀತಿಯಲ್ಲಿ ಇಸ್ರೇಲ್ನ ಗಡಿಯನ್ನು ನಾಶ ಮಾಡಬೇಕು ಎಂದು ನಟಿ ಹೇಳಿದ್ದರು. ಇಷ್ಟೇ ಅಲ್ಲದೇ ಹಮಾಸ್ ಉಗ್ರರು ಇಸ್ರೇಲಿಗರನ್ನು ಒತ್ತೆಯಾಳಾಗಿಟ್ಟುಕೊಂಡಿರುವ ಫೋಟೋಗಳನ್ನು ಶೇರ್ ಮಾಡಿದ್ದ ನಟಿ ಇದಕ್ಕೆ ನಗುವ ಎಮೋಜಿ ಹಾಕಿದ್ದರು.