ತೆಲುಗು ಚಿತ್ರರಂಗದ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರಿಗೆ ಸೇರಿದ್ದ ಹೈದರಾಬಾದ್ನಲ್ಲಿದ್ದ ಎನ್ ಕನ್ವೆನ್ಷನ್ ಸೆಂಟರ್ ಅನ್ನು ತೆಲಂಗಾಣ ಸರ್ಕಾರ ಕಳೆದ ತಿಂಗಳು ನೆಲಸಮಗೊಳಿಸಿತು. ತೆಲಂಗಾಣ ಸರ್ಕಾರ ಅಡಿಯಲ್ಲಿ ಕೆಲಸ ಮಾಡುತ್ತಿರುವ ಹೈಡ್ರಾ ತಂಡ, ಎನ್ ಕನ್ವೆನ್ಷನ್ ಸೆಂಟರ್ ಅನ್ನು ನೆಲಸಮಗೊಳಿಸಿದ್ದು, ಇದರ ವಿರುದ್ಧ ನಟ ನಾಗಾರ್ಜುನ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ವಿವಾದದ ಬಗ್ಗೆ ನಾಗಾರ್ಜುನ ಸಹೋದರ ಪ್ರತಿಕ್ರಿಯೆ ನೀಡಿದ್ದಾರೆ.
ಹತ್ತು ವರ್ಷಗಳ ಹಿಂದೆ ಹೈದರಾಬಾದ್ನ ಮಾದಾಪುರದ ಬಳಿ 10 ಎಕರೆ ಪ್ರದೇಶದಲ್ಲಿ ನಾಗಾರ್ಜುನ ಎನ್ ಕನ್ವೆನ್ಷನ್ ಸೆಂಟರ್ ನಿರ್ಮಾಣ ಮಾಡಿದ್ದರು. ಆದರೆ ಎನ್ ಕನ್ವೆನ್ಷನ್ ಸೆಂಟರ್ ನಿರ್ಮಾಣವನ್ನು ರಾಜಕಾಲುವೆ ಮೇಲೆ ಮಾಡಲಾಗಿದೆ ಎಂದು ಆರೋಪಿಸಿದ್ದ ಹೈಡ್ರಾ ತಂಡ ಏಕಾಏಕಿ ಎನ್ ಕನ್ವೆನ್ಷನ್ ಅನ್ನು ನೆಲಸಮಗೊಳಿಸಿತು. 1.2 ಎಕರೆ ರಾಜಕಾಲುವೆ ಪ್ರದೇಶ ಹಾಗೂ 2 ಎಕರೆ ಬಫರ್ ವಲಯವನ್ನು ಅತಿಕ್ರಮಿಸಿಕೊಂಡು ಎನ್ ಕನ್ವೆನ್ಷನ್ ಸೆಂಟರ್ ಅನ್ನು ನಿರ್ಮಾಣ ಮಾಡಲಾಗಿದೆ ಎಂದು ಹೈಡ್ರಾ ಆರೋಪಿಸಿತ್ತು. ತಮ್ಮ ಕಟ್ಟಡ ನೆಲಸಮವಾದ ಬಳಿಕ ಇದನ್ನು ಖಂಡಿಸಿ ನಾಗಾರ್ಜುನ ಟ್ವೀಟ್ ಮಾಡಿದ್ದರು.
ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಗಾರ್ಜುನ ಸಹೋದರ ಅಕ್ಕಿನೇನಿ ವೆಂಕಟ್, ‘ನಾಗಾರ್ಜುನ ಆತುರ ಪಡುವೆ ವ್ಯಕ್ತಿಯಲ್ಲ, ಬಹಳ ಸಮಾಧಾನದ ವ್ಯಕ್ತಿ ಮತ್ತು ಪಕ್ಕಾ ಜಂಟಲ್ಮ್ಯಾನ್. ಹೈಡ್ರಾದ ಕೆಲಸಗಳ ಬಗ್ಗೆ ದಿನಕ್ಕೆ ಒಬ್ಬರು ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಒಬ್ಬರ ಮೇಲೊಬ್ಬರು ಆರೋಪಗಳನ್ನು ಮಾಡುತ್ತಿದ್ದಾರೆ ಆದರೆ ನಾಗಾರ್ಜುನ ಹಾಗೆ ಮಾಡುವವರಲ್ಲ. ಅವರಿಗೆ ಈ ಬಗ್ಗೆ ಬೇಸರವಿದೆ. ಆದರೆ ಯಾರನ್ನೋ ದೂಷಿಸಿ ಅದನ್ನು ಹೊರಹಾಕುವ ವ್ಯಕ್ತಿ ಅವರಲ್ಲ, ಘಟನೆ ಬಳಿಕವೂ ಅವರು ಕಾಮ್ ಆಗಿದ್ದಾರೆ. ಆದರೆ ಕಾನೂನು ಹೋರಾಟ ನಡೆಯುತ್ತಲೇ ಇದೆ. ಇನ್ನೊಂದು ವಾರದಲ್ಲಿ ಎಲ್ಲ ಮಾಧ್ಯಮದವರಿಗೂ ಆ ಸುದ್ದಿ ಗೊತ್ತಾಗುತ್ತದೆ’ ಎಂದಿದ್ದಾರೆ.
ಕೆಲವರ ಆರೋಪವೆಂದರೆ ಎನ್ ಕನ್ವೆನ್ಷನ್ ಸೆಂಟರ್ ವಿರುದ್ಧ ಹಲವು ದೂರುಗಳು ಈಗಾಗಲೇ ಹೋಗಿದ್ದವಂತೆ. ಆದರೆ 2014 ರಿಂದಲೂ ನಾಗಾರ್ಜುನ, ತೆಲಂಗಾಣ ಸರ್ಕಾರದೊಂದಿಗೆ ಆಪ್ತ ಸಂಬಂಧ ಹೊಂದಿದ್ದ ಕಾರಣ ಕನ್ವೆನ್ಷನ್ ಸೆಂಟರ್ ಉಳಿದುಕೊಂಡಿತ್ತು. ಆದರೆ ತೆಲಂಗಾಣದ ಹೊಸ ಸಿಎಂ ರೇವಂತ್ ರೆಡ್ಡಿ, ಒತ್ತುವರಿದಾರರ ವಿರುದ್ಧ ಸಮರ ಸಾರಿದ್ದು, ಯಾವ ವಶೀಲಿಬಾಜಿಗೂ ಬಗ್ಗುತ್ತಿಲ್ಲವಾದ್ದರಿಂದ ನಾಗಾರ್ಜುನ ಮಾತ್ರವಲ್ಲದೆ ಹಲವು ದೊಡ್ಡ ಉದ್ಯಮಿಗಳ, ರಾಜಕಾರಣಿಗಳಿಗೆ ಸೇರಿದ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ.