ಬೆಂಗಳೂರು: ರಾಜ್ಯ ಚುನಾವಣೆ ಹೊತ್ತಿನಲ್ಲಿ ಬೆಂಗಳೂರು ಸೇರಿ ರಾಜ್ಯದಲ್ಲಿ ಕೋವಿಡ್ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ಚುನಾವಣೆ ಆಯೋಗಕ್ಕೆ ಮತ್ತೆ ಕೊರೊನಾ ಟೆನ್ಷನ್ ಶುರುವಾಗಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಕಳೆದ ಒಂದು ವಾರ ದಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡು ಬಂದಿದ್ದು, ಹೀಗಾಗಿ ಮತ್ತೆ ಮುನ್ನೆಚ್ಚರಿಕೆ ಕ್ರಮ ಗಳನ್ನ ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಚುನಾವಣೆ ರ್ಯಾಲಿ, ಮತದಾನ ವೇಳೆ ಕೋವಿಡ್ ಪ್ರಕರಣಗಳು ಸಂಖ್ಯೆ ಏರಿಕೆ ಭೀತಿ ಶುರುವಾಗಿದೆ.
ಇನ್ನೂ ಈಗಾಗಲೇ ಆರೋಗ್ಯ ಇಲಾಖೆಯಿಂದ ಕೋವಿಡ್ 19 ಮಾರ್ಗಸೂಚಿ ಪ್ರಕಟವಾಗಿದ್ದು, ಆದರೆ ಕಟ್ಟುನಿಟ್ಟಾಗಿ ಪಾಲನೆಯಾಗದ ಹಿನ್ನೆಲೆ ಮತ್ತಷ್ಟು ನಿಯಮಗಳನ್ನ ಜಾರಿ ಮಾಡಲು ಚಿಂತನೆ ನಡೆಸಿದೆ. ಚುನಾವಣೆ ಪ್ರಚಾರದ ಅಬ್ಬರದಲ್ಲಿ ಕೋವಿಡ್ ಬಗ್ಗೆ ಜನ ಮರೆತಿದ್ದು, ಹೀಗಾಗಿ ಶೀಘ್ರದಲ್ಲೇ ಮತ್ತೊಂದು ಕೋವಿಡ್ ಮಾರ್ಗಸೂಚಿ ಬಿಡುಗಡೆ ಸಾದ್ಯತೆ ಇದೆ. ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಚುನಾವಣಾ ಸಿಬ್ಬಂದಿಗಳಿಗೆ ಬೂಸ್ಟರ್ ಡೋಸ್ ಕಡ್ಡಾಯ ಮಾಡಲು ಸೂಚಿಸಿದೆ.
ಚುನಾವಣಾ ರ್ಯಾಲಿ ಸಂದರ್ಭದಲ್ಲಿ ಕೋವಿಡ್ ಹರಡುವಿಕೆಯ ಪ್ರಕ್ರಿಯೆ ಹೆಚ್ಚಾದಲ್ಲಿ ಆಯಾ ರಾಜಕೀಯ ಪಕ್ಷವೇ ಹೊಣೆ ಹೊರಬೇಕು. ಮತದಾನದ ದಿನ ಹೆಲ್ಪ್ ಡೆಸ್ಕ್ ಆರಂಭಿಸಬೇಕು. ಮತ ಹಾಕಲು ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನಿಯಮಾನುಸಾರ ಟೋಕನ್ ನೀಡಬೇಕು. ಚುನಾವಣೆ ಪ್ರಚಾರದ ರ್ಯಾಲಿ, ವೇಳೆ ಕೋವಿಡ್ ಹರಡುವಿಕೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧಾರ ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಪಾಡಲು ಮತಗಟ್ಟೆ ಹಾಗೂ ಹೊರಭಾಗದಲ್ಲಿ ಮಾರ್ಕ್ ಮಾಡಬೇಕು. ಎಲ್ಲಾ ಮತಗಟ್ಟೆಗಳ ಮುಂದೆ ಕೋವಿಡ್ ಜಾಗೃತಿ ಬಗ್ಗೆ ಪೋಸ್ಟರ್ ಅಂಟಿಸುವಂತೆ ಸೂಚಿಸಲಾಗಿದೆ.
ಇನ್ನೂ ಮತದಾನದ ಕೊನೆಯ ಒಂದು ಗಂಟೆ ಕೋವಿಡ್ ಸೋಂಕಿತರಿಗೆ ಮತದಾನಕ್ಕೆ ಅವಕಾಶ ನೀಡಲು ಸೂಚಿಸಿದೆ. ಇನ್ನೂ ಮತ್ತೊಂದೆಡೆ ಕೋವಿಡ್ ಪರೀಕ್ಷೆ ಗಳನ್ನ ಮತ್ತೆ ಹೆಚ್ಚಿಸಲು ನಿರ್ಧಾರ ಮಾಡಲಾಗಿದ್ದು, ಬೆಂಗಳೂರಿನಲ್ಲಿ ನಿತ್ಯ ಹತ್ತು ಸಾವಿರ ಪರೀಕ್ಷೆ ಗುರಿ ಹೊಂದಲಾಗಿದೆ.