ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಕುರಿತು ತಡರಾತ್ರಿವರೆಗೂ ಸಭೆ ನಡೆದರೂ ಅಧ್ಯಕ್ಷರ ನೇಮಕ ಅಂತಿಮವಾಗಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ (Randeep Surjewala) ಜೊತೆ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivkumar) ಸುದೀರ್ಘ ಚರ್ಚೆ ನಡೆಸಿದರು.
ಅಸಮಧಾನಿತ ಕೆಲವು ಹಿರಿಯ ನಾಯಕರಿಗೆ ಸಭೆಯಿಂದಲೇ ಕರೆ ಮಾಡಿ ಸುರ್ಜೆವಾಲಾ ಅಭಿಪ್ರಾಯ ಕೇಳಿದರು. ಗೊಂದಲ ಇಲ್ಲದಂತೆ ಪಟ್ಟಿ ಸಿದ್ದ ಪಡಿಸಲು ಕಾಂಗ್ರೆಸ್ ನಾಯಕರ ಕಸರತ್ತು ನಡೆಯಿತು. ಅಸಮಧಾನಿತ ಶಾಸಕರ ಪೈಕಿ ಬಸವರಾಜ ರಾಯರೆಡ್ಡಿಯನ್ನು ಸಭೆಗೆ ಕರೆಸಿ ಸುರ್ಜೇವಾಲಾ, ಸಿದ್ದರಾಮಯ್ಯ, ಡಿಕೆಶಿ ಮಾತನಾಡಿದರು.
ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿಕೆಶಿ, ಪಕ್ಷ ಸಂಘಟನೆ ಹಾಗೂ ಬೋರ್ಡ್ ನೇಮಕದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಮೊದಲ ಸುತ್ತಿನ ಮಾತುಕತೆ ಆಗಿದೆ. ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿದಂತೆ ಎಲ್ಲಾ ಭಾಗದ ಶಾಸಕರನ್ನ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈಗ ಪಟ್ಟಿ ಮಾಡಿರುವ ಹೆಸರುಗಳನ್ನ ದೆಹಲಿ ನಾಯಕರಿಗೆ ಕಳುಹಿಸುತ್ತೇವೆ. ಇನ್ನೊಂದು ರೌಂಡ್ ನಮ್ಮ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ಏನಾಯ್ತು?
ಶಾಸಕರಿಗೆ ಹಾಗೂ ಪರಿಷತ್ ಸದಸ್ಯರಿಗೆ ಮಾತ್ರ ಅವಕಾಶಕ್ಕೆ ಸಿಎಂ ಪಟ್ಟು ಹಿಡಿದರೆ ಶೇ.40 ರಷ್ಟು ಕಾರ್ಯಕರ್ತರಿಗೆ ನಿಗಮ ಮಂಡಳಿ ಸ್ಥಾನಕ್ಕೆ ಡಿಕೆ ಶಿವಕುಮಾರ್ ಬೇಡಿಕೆ ಇಟ್ಟಿದ್ದಾರೆ.
25 ಶಾಸಕರು, 15 ಕಾರ್ಯಕರ್ತರ ಪರಿಗಣನೆಗೆ ಸಿಎಂ, ಡಿಸಿಎಂ ಸಲಹೆ ನೀಡಿದ್ದಾರೆ. ಶಾಸಕರು ಮತ್ತು ಪರಿಷತ್ ಸದಸ್ಯರು ಆದ್ರೆ 30+4 ರಿಂದ 5 ಜನರಿಗೆ ಮಾತ್ರ ಅವಕಾಶ ಸಿಗಲಿದೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಬೇಗನೇ ತೀರ್ಮಾನ ಮಾಡಬೇಕೆಂದು ಇಬ್ಬರು ಒತ್ತಾಯಿಸಿದ್ದಾರೆ.