ಬೆಂಗಳೂರು, ಮಾರ್ಚ್ 19: ತಿಗಳ ಸಮಾಜವನ್ನು ಮೇಲೆತ್ತಬೇಕೆಂದೇ ನಿಗಮ ಸ್ಥಾಪನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ತಿಗಳ ಸಮುದಾಯ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿದ ಹಿನ್ನೆಲೆಯಲ್ಲಿ ಇಂದು ತುಮಕೂರಿನ ಜ್ಞಾನಂದಾಪುರಿ ಮಹಾಸ್ವಾಮಿ ನೇತೃತ್ವದಲ್ಲಿ ತಿಗಳ ಸಮುದಾಯದವರು ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ತಿಗಳ ಸಮಾಜದ ಬಾಂಧವರು ತಮ್ಮ ವೃತ್ತಿಯನ್ನು ಸಮರ್ಥವಾಗಿ ಮಾಡಿದ್ದಾರೆ. ಯುವ ಜನಾಂಗಕ್ಕೆ ವಿದ್ಯೆ ಕೊಟ್ಟು ಮುಂದೆ ಬರಬೇಕೆಂದು ಎಂದು ಇಡೀ ಜೀವನವನ್ನೇ ಸವೆಸಿದ್ದಾರೆ.
ತಿಗಳ ಸಮಾಜ ಶ್ರಮಿಕ ಸಮಾಜ ವಾಗಿದ್ದು, ಮಾಡಿಯೂ ಮಾಡಿದ್ದೇವೆ ಎಂದು ಹೇಳಿಕೊಳ್ಳದ ಸಮಾಜ. ಸಂಭಾವಿತ ಸಜ್ಜನ ಸಮಾಜ ಇದು. ಈ ಸಮಾಜವನ್ನು ಗುರುತಿಸಬೇಕೆಂದು ಮನದಾಳದ ಇಚ್ಛೆ ಇತ್ತು. ಇದಕ್ಕೆ ನೆ.ಲ.ನರೇಂದ್ರ ಬಾಬು ಅವರು ಬಹಳಷ್ಟು ಪುಷ್ಟಿ, ಶಕ್ತಿಯನ್ನು ನೀಡಿದ್ದಾರೆ. ಹಾಗಾಗಿ ನಿಗಮ ಸ್ಥಾಪನೆ ಮಾಡಲಾಯಿತು. ಇದಕ್ಕಾಗಿ ಆಯವ್ಯಯದಲ್ಲಿ ವಿಶೇಷವಾದ ಅನುದಾನವನ್ನು ಮೀಸಲಿಡಲಾಗಿದೆ. ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಎಂಬ ಮಂತ್ರದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸದ್ಬಳಕೆಯಾಗಬೇಕು ಈ ಅವಕಾಶವನ್ನು ಸದುಪಯೋಗ ಮಾಡಲು ಸಮಾಜದ ಯುವಕರಿಗೆ, ಮಹಿಳೆಯರಿಗೆ ಇದನ್ನು ಉಪಯೋಗ ಮಾಡಿಕೊಳ್ಳಲು ತಿಳಿಸಬೇಕು. ಈ ಬಗ್ಗೆ ಪ್ರಚಾರವೂ ಆಗಬೇಕು. ಆಗ ಎಲ್ಲರಿಗೂ ಕಾರ್ಯಕ್ರಮ ಮುಟ್ಟುತ್ತದೆ. ಒದಗಿಸಲಾಗಿರುವ ಅನುದಾನವನ್ನು ಸದ್ಬಳಕೆ ಮಾಡಿ, ಶ್ರಮ ವಹಿಸಿ ಮುಂದೆ ಬರಲು ಸಮಾಜದ ಯುವಕರಿಗೆ ಮಾರ್ಗದರ್ಶನ ಮಾಡಬೇಕು ಎಂದರು. ನಮ್ಮ ಕೆಲಸಗಳು ಮಾತನಾಡಬೇಕು. ಮನದಾಳದಿಂದ, ಪ್ರೀತಿಯಿಂದ, ವಿಶ್ವಾಸದಿಂದ ಈ ಕೆಲಸ ಮಾಡಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.