ಬೆಂಗಳೂರು : ವಿಧಾನಸಭಾ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಆರ್. ಅಶೋಕ್ ಅವರು ಕಾಂಗ್ರೆಸ್ ವಿರುದ್ಧ ಬೆಂಕಿಯುಗುಳಿದ್ದಾರೆ.
ನೂತನ ವಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಅವರು, ನನ್ನ ನೇತೃತ್ವದಲ್ಲಿ ರಾಜ್ಯದ ಜನತೆ, ಬಡವರ ಧ್ವನಿಯಾಗಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಉತ್ತರ ನೀಡಲಿದ್ದೇವೆ ಎಂದು ಹೇಳಿದರು.
ನಾವು (ಬಿಜೆಪಿ) 66 ಜನ ಹಾಗೂ ಜೆಡಿಎಸ್ನ 19 ಮಂದಿ ಸೇರಿ 85 ಶಾಸಕರು ಇದ್ದೇವೆ. ನಮ್ಮದು ದೊಡ್ಡ ವಿರೋಧ ಪಕ್ಷ. ನನ್ನದು ಒಂದೇ ಸಿದ್ಧಾಂತ. ಸಿದ್ದರಾಮಯ್ಯ ಅವರದು ಜೆಡಿಎಸ್ ಪಕ್ಷದಲ್ಲಿದ್ದಾಗ ಒಂದು ಸಿದ್ಧಾಂತ, ಕಾಂಗ್ರೆಸ್ನಲ್ಲಿದ್ದಾಗ ಒಂದು ಸಿದ್ಧಾಂತ ಹಾಗು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಒಂದು ಸಿದ್ಧಾಂತ. ಆದರೆ, ನಾನು ತರಗೆಲೆಯಲ್ಲ, ಗಟ್ಟಿ ಕಮಲ ಎಂದು ಸಿಎಂ ಸಿದ್ದರಾಮಯ್ಯಗೆ ಟಕ್ಕರ ಕೊಟ್ಟರು.
ಕಾಂಗ್ರೆಸ್ ರೈತರಿಗೆ ಮೋಸ ಮಾಡ್ತಿದೆ
ಸರ್ಕಾರದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿದೆ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರವನ್ನು ನಾವು ಬಯಲಿಗೆಳೆಯುತ್ತೇವೆ. ಕಾಂಗ್ರೆಸ್ ಕೊಟ್ಟ ಭರವಸೆಗಳನ್ನ ಈಡೇರಿಸಿಲ್ಲ. ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತರಿಗೆ ಮೋಸ ಮಾಡ್ತಿದೆ. ನಮ್ಮ ಶಾಸಕರಿಗೆ ಅನುದಾನ ನೀಡುತ್ತಿಲ್ಲ, ಅನುದಾನ ನಿಲ್ಲಿಸಿ ಗ್ಯಾರಂಟಿಗಳಿಗೆ ನೀಡ್ತಿದ್ದಾರೆ. ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಸ್ತಿದ್ದಾರೆ. ರಾಜ್ಯದ ಜನರಿಗೆ, ಬಡವರಿಗೆ ಸಿಗಬೇಕಾದ ನ್ಯಾಯಕ್ಕಾಗಿ ನಾನು ಹೋರಾಟ ಮಾಡುತ್ತೇನೆ ಎಂದು ಗುಡುಗಿದರು.