ಬೆಂಗಳೂರು: ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಕಳೆದ ಮೂರು ವರ್ಷಗಳಿಂದ ಈ ಬಗ್ಗೆ ಹೇಳುತ್ತಾ ಬರುತ್ತಿದ್ದೇವೆ.
ಕರ್ನಾಟಕ ಕರೆಪ್ಷನ್ ಕ್ಯಾಪಿಟಲ್ ಎಂಬ ಹೆಸರನ್ನು ಬಿಜೆಪಿ ಸರ್ಕಾರ ಕೊಟ್ಟಿದೆ. ಮುಖ್ಯಮಂತ್ರಿ ಸಾಕ್ಷಿ ಕೊಡಿ ಅಂತ ಕೇಳುತ್ತಿದ್ದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಶೇಕಡಾ 40ರಷ್ಟು ಕಮಿಷನ್ ಇದೆ ಎಂದು ಎರಡು ಲಕ್ಷ ಗುತ್ತಿಗೆದಾರರು ಜೊತೆಗೂಡಿ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಪ್ರಧಾನಮಂತ್ರಿಗೆ ಪತ್ರವನ್ನು ಬರೆದರು. ಶಾಸಕರುಗಳು, ಅಧಿಕಾರಿಗಳು, ಸಾರ್ವಜನಿಕರು ತಮ್ಮ ನೋವನ್ನು ವ್ಯಕ್ತಪಡಿಸಿದರು. ಈಗ ಒಬ್ಬ ಬಿಜೆಪಿ ಶಾಸಕರ ಮನೆ ಮೇಲೆ ದಾಳಿ ಮಾಡಲಾಗಿದೆ. ಸುಮಾರು ಎಂಟು ಕೋಟಿ ಸಿಕ್ಕಿದೆ ಅಂತ ಲೋಕಾಯುಕ್ತರು ತಿಳಿಸಿದ್ದಾರೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಲೋಕಾಯುಕ್ತರಿಗೆ ಕೈಜೋಡಿಸಿ ಅಭಿನಂದಿಸುತ್ತೇನೆ. ರಾಜ್ಯವನ್ನು ರಕ್ಷಿಸಲು ಲೋಕಾಯುಕ್ತರು ಸಹಕಾರವನ್ನು ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.