ಬೆಂಗಳೂರು:- ಬಿಬಿಎಂಪಿ ವಿಶೇಷ ಅಯುಕ್ತ ಶಿವಾನಂದ ಕಲ್ಕೆರಿ ಅವರು ಇಂದು ಬಿಬಿಎಂಪಿ ಬಜೆಟ್ ಮಂಡಿಸಲಿದ್ದಾರೆ. ಇಂದು ಬೆಳಗ್ಗೆ 10.30 ಕ್ಕೆ ಟೌನ್ ಹಾಲ್ನಲ್ಲಿ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದೆ.
ರಾಜಧಾನಿ ಬೆಂಗಳೂರಿನ ಅಭಿವೃದ್ಧಿ ಚಟುವಟಿಕೆಗಳಿಗೆ ಮೀಸಲಿರುವ ಬಿಬಿಎಂಪಿ ಬಜೆಟ್ಗೆ ಮುಹೂರ್ತ ನಿಗದಿಯಾಗಿದ್ದು, ಬೆಂಗಳೂರು ಮಹಾನಗರ ಉಸ್ತುವಾರಿಯಾಗಿರೋ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಜೆಟ್ಗೆ ಒಪ್ಪಿಗೆ ಸೂಚಿಸಿದ್ದಾರೆ. 2024-25 ನೇ ಸಾಲಿನ ಬಜೆಟ್ ಮಂಡಿಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಇಂದು ಬೆಳಗ್ಗೆ 10.30 ಕ್ಕೆ ಬೆಂಗಳೂರಿನ ಟೌನ್ ಹಾಲ್ನಲ್ಲಿ ಬಜೆಟ್ ಮಂಡನೆಯಾಗಲಿದೆ.
ರಾಜ್ಯ ಸರ್ಕಾರ 2024-25 ನೇ ಸಾಲಿನಲ್ಲಿ ಬಿಬಿಎಂಪಿಗೆ 3500 ಕೋಟಿ ಅನುದಾನ ನೀಡಿದೆ. ರಾಜ್ಯ ಸರ್ಕಾರದ 3500 ಕೋಟಿ ಅನುದಾನ, ಬಿಬಿಎಂಪಿ 6 ಸಾವಿರ ಕೋಟಿ ಅದಾಯ ಸೇರಿದಂತೆ ಹೊಸ ಜಾಹೀರಾತು ಕಾಯ್ದೆಯಿಂದ ಸುಮಾರು 2 ಸಾವಿರ ಕೋಟಿ ರೂಪಾಯಿ ವಿವಿಧ ಮೂಲಗಳಿಂದ ಕ್ರೂಢೀಕರಿಸಿ 12 ಸಾವಿರ ಕೋಟಿ ಬಜೆಟ್ ಮಂಡನೆ ಅಗುವ ಸಾಧ್ಯತೆ ಇದೆ.
ಸದ್ಯ ಡಿಸಿಎಂ ಡಿಕೆ ಶಿವಕುಮಾರ್ ಕನಸಿನ ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆಗೆ ಜೀವ ನೀಡುವ ಹಿನ್ನೆಲೆ ಪಾಲಿಕೆ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ.
ಇಂದಿರಾ ಕ್ಯಾಂಟೀನ್ಗೆ 200 ಕೋಟಿ ರೂಪಾಯಿ ಅನುದಾನ. ವಸತಿ ಯೋಜನೆ ಅಡಿಯಲ್ಲಿ, ಮಹಿಳೆಯರಿಗೆ ಹಾಸ್ಟೆಲ್ ನಿರ್ಮಾಣ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಪಾಲಿಕೆಯಿಂದ ಎರಡು ಆಂಬುಲೆನ್ಸ್ ನೀಡುವ ಸಾಧ್ಯತೆ ಇದೆ. ಇನ್ನು ಬಿ ಖಾತೆಯ ಆಸ್ತಿಗಳಿಗೆ ಎ ಖಾತೆ ಹಂಚಿಕೆಯ ಕ್ರಮ, ಪ್ರವಾಹ ತಡೆಗೆ ಒಳಚರಂಡಿ ಅಭಿವೃದ್ಧಿಗಾಗಿ ಅನುದಾನ, ಕೆರೆಗಳಿಗೆ ತಡೆ ಗೇಟ್, ಹೈಡೆನ್ಸಿಟಿ ಕಾರಿಡಾರ್ ಅಭಿವೃದ್ಧಿಗೆ ಅನುದಾನ ನೀಡುವ ನಿರೀಕ್ಷೆ ಇದೆ. ಪ್ರಮುಖ 74 ಜಂಕ್ಷನ್ ಅಭಿವೃದ್ಧಿ, ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿವರೆಗೆ 5 ಕಿಮೀ ಎಲಿವೇಟೆಡ್ ರಸ್ತೆ ನಿರ್ಮಾಣ. 110 ಗ್ರಾಮಗಳಲ್ಲಿ ದುಸ್ಥಿತಿಯಲ್ಲಿರುವ ರಸ್ತೆಗಳ ಪುನರ್ ನಿರ್ಮಾಣ ಮಾಡುವ ಯೋಜನೆ ಘೋಷಿಸೋ ಸಾಧ್ಯತೆ ಇದೆ. ಪ್ರತಿ ವಾರ್ಡ್ಗೂ ಕುಡಿಯುವ ನೀರಿಗೆ ಹೆಚ್ಚಿನ ಅನುದಾನ, ಪಾಲಿಕೆ ವ್ಯಾಪ್ತಿಯ ಹೊಸ 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜಿಗೆ ಹೆಚ್ಚಿನ ಒತ್ತು, ಪ್ರತಿ ವಾರ್ಡ್ನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಘೋಷಣೆ ನಿರೀಕ್ಷೆ ಇದೆ.
ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ವ್ಯವಸ್ಥೆ ಜಾರಿ, ಬಿಬಿಎಂಪಿ ಆಸ್ತಿ ರಕ್ಷಣೆಗೆ ಅನುದಾನ, ಹಲವು ಸಂಘ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಅನುದಾನಕ್ಕೂ ಕತ್ತರಿ ಬೀಳುವ ಸಾಧ್ಯತೆ ಇದೆ. ಕೆಂಪೇಗೌಡ ಜಯಂತಿ, ಕರಗ ಮಹೋತ್ಸವ, ಅಂಬೇಡ್ಕರ್ ಜಯಂತಿಗೆ ಕೋಟಿ ಕೋಟಿ ರೂಪಾಯಿ ಅನುದಾನ ಮೀಸಲಿಡುವ ಸಾಧ್ಯತೆ ಇದೆ. ಇನ್ನು ಮಹಿಳೆಯರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ನಿರ್ಭಯ ಯೋಜನೆಯಡಿ ಬೆಂಗಳೂರಿನಲ್ಲಿ ದಿ ಸೇಫ್ ಸಿಟಿ ಪ್ರಾಜೆಕ್ಟ್ ಜಾರಿಗೆ ತರುವ ಸಾಧ್ಯತೆ ಇದೆ.