ಬೆಂಗಳೂರು: ಅಯೋಧ್ಯೆಯಲ್ಲಿ ರಾಮನದ್ದೇ ಜಪ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾನಕ್ಕೆ ಕ್ಷಣಗಣನೆ ಶುರುವಾಗಿದೆ. ಸೋಮವಾರ ಅಪರೂಪದ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿ ಆಗ್ತಿದೆ. ಹೀಗಾಗಿ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿದ್ದು, ಹಬ್ಬದ ವಾತಾವರಣವೇ ಸೃಷ್ಟಿ ಆಗಿದೆ. ಅದ್ಭುತ ತೇಜಸ್ವಿ ಮುಖ ಹೊಂದಿರುವ ಬಾಲ ರಾಮನನ್ನು ನೋಡುವ ಮೂಲಕ, ಅರುಣ್ ಯೋಗಿರಾಜ್ ಕೈಚಳಕವನ್ನು ಎಲ್ಲರೂ ಕಣ್ತುಂಬಿಕೊಂಡಿದ್ದಾರೆ
ಇಕ್ಷ್ವಾಕು ವಂಶದ ಪ್ರಭು ರಾಮ, ಅಯೋಧ್ಯೆಯಲ್ಲಿ ಭಕ್ತರ ದರ್ಶನ ತೋರಲಿದ್ದಾನೆ. ಇಡೀ ನಗರವೇ ವಿದ್ಯುತ್ ದೀಪಗಳಿಂದ ಕಂಗೊಳಿಸ್ತಿದೆ. ಸೋಮವಾರ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಇಡೀ ಭರತ ಭೂಮಿ ಕಾತರದಿಂದ ಕಾಯ್ದಿದೆ.
ಗುರುವಾರ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಬೆನ್ನಲ್ಲೇ ಶುಕ್ರವಾರ ಪೂರ್ಣರೂಪದ ಬಾಲರಾಮನದ ದರ್ಶನವಾಗಿದೆ. ಬಾಲರಾಮನ ಸಂಪೂರ್ಣ ವಿಗ್ರಹವನ್ನು ತೋರಿಸಲಾಗಿದೆ. ಇದೀಗ ಎಲ್ಲೆಡೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ವಿಗ್ರಹವನ್ನು ತಯಾರಿಸಿದ್ದು ಪ್ರಾಣ ಪ್ರತಿಷ್ಠಾಪನೆಯ ಮುಹೂರ್ತ ಜನವರಿ 22 ರಂದು ಮಧ್ಯಾಹ್ನ 12.30 ಕ್ಕೆ. ಗುರುವಾರ 51 ಇಂಚಿನ ಕಪ್ಪು ಶಿಲೆಯ ಮೂರ್ತಿಯನ್ನು ಗರ್ಭಗುಡಿಯಲ್ಲಿ ಬಟ್ಟೆ ಹೊದಿಸಿಡಲಾಗಿತ್ತು . ವಿಶ್ವ ಹಿಂದೂ ಪರಿಷತ್ ಶೇರ್ ಮಾಡಿದ ರಾಮ್ ಲಲ್ಲಾನ ಮೊದಲ ಫೋಟೋ ಕಪ್ಪು ಪ್ರತಿಮೆಯ ಕಣ್ಣುಗಳನ್ನು ಹಳದಿ ಬಟ್ಟೆಯಿಂದ ಮುಚ್ಚಲಾಗಿತ್ತು.
ಶುಕ್ರವಾರ ಬಾಲರಾಮನ ವಿಗ್ರಹದ ಫೋಟೋ ಹೊರಬೀಳುತ್ತಿದ್ದಂತೆಯೇ ರಾಮಭಕ್ತರು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ಜೈ ಶ್ರೀ ರಾಮ್ ಎಂದು ಬರೆದುಕೊಂಡರು. ಹಾಗಿದ್ರೆ ಈ ವಿಗ್ರಹದಲ್ಲಿ ಏನೇನು ವಿಶೇಷತೆಗಳು ಇವೆ ಎಂಬುದನ್ನು ನೋಡೋಣ.