ಚೆನ್ನೈ: 17ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಬಾಕಿಯಿದೆ. ಚೆನ್ನೈನ ಚಿದಂಬರಂ (ಚೆಪಾಕ್) ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ಅದ್ಧೂರಿ ಸಮಾರಂಭದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದ್ದು, ಇನ್ನೆರಡು ತಿಂಗಳ ಕಾಲ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.
ಶುಕ್ರವಾರ (ಮಾ.22) ಉದ್ಘಾಟನಾ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 3 ಬಾರಿ ರನ್ನರ್ ಅಪ್ ಪ್ರಶಸ್ತಿ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಆರ್ಸಿಬಿ ಮತ್ತು ಚೆನ್ನೈ ನಡುವೆ 31 ಪಂದ್ಯಗಳು ನಡೆದಿದ್ದು, 20 ಪಂದ್ಯಗಳಲ್ಲಿ ಚೆನ್ನೈ, 10 ಪಂದ್ಯಗಳಲ್ಲಿ ಆರ್ಸಿಬಿ ಗೆಲುವು ಸಾಧಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿದೆ.
ಧೋನಿಗೆ ಇದು ಕೊನೇ ಐಪಿಎಲ್?
2023ರ ಟೂರ್ನಿ ಆರಂಭದಿಂದಲ್ಲೇ ನಿವೃತ್ತಿಯ ಸುಳಿವು ನೀಡಿದ್ದ ಸಿಎಸ್ಕೆ ನಾಯಕ ಎಂ.ಎಸ್ ಧೋನಿ ಅವರಿಗೆ 17ನೇ ಆವೃತ್ತಿಯ ಐಪಿಎಲ್ ಟೂರ್ನಿ ಕೊನೇ ಲೀಗ್ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ ಮಹಿ ಆಪ್ತರು ಇನ್ನೂ ಎರಡು ಸೀಸನ್ ಆಡಬಹುದು ಎಂದು ಸುಳಿವು ಕೊಟ್ಟಿದ್ದಾರೆ. ಈ ನಡುವೆ ಆಸೀಸ್ ಬ್ಯಾಟರ್ ಡೇವಿಡ್ ವಾರ್ನರ್, ಭಾರತದ ಅಮಿತ್ ಮಿಶ್ರಾ, ಶಿಖರ್ ಧವನ್, ಪಿಯೂಶ್ ಚಾವ್ಲಾ ಅವರಿಗೂ ಇದು ಕೊನೆಯ ಟೂರ್ನಿ ಆಗಲಿದೆ ಎಂದು ಮೂಲಗಳು ತಿಳಿಸಿವೆ.