ತಿರುವನಂತಪುರಂ: ಮೂರನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶವು ‘ದುಸ್ತರವಾದ ಅಪಾಯ’ಕ್ಕೆ ಸಿಲುಕಲಿದೆ. ಅದರ ಬಳಿಕ ಪಶ್ಚಾತ್ತಾಪ ಪಡುವುದರಲ್ಲಿ ಯಾವ ಅರ್ಥವೂ ಇರುವುದಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಆರೆಸ್ಸೆಸ್ ಹಾಗೂ ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದ ಪಿಣರಾಯಿ, ದೇಶದಲ್ಲಿನ ವಿವಿಧತೆಯನ್ನು ಅವರು,
ನಾಶಪಡಿಸುತ್ತಿದ್ದಾರೆ ಮತ್ತು ಧರ್ಮದ ಆಧಾರದಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಕೇರಳದ ಉತ್ತರ ಭಾಗದ ಕಣ್ಣೂರು ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ, ಗೋವುಗಳ ಹೆಸರಿನಲ್ಲಿ, ಯಾವ ರೀತಿಯ ಆಹಾರ ಸೇವಿಸಬೇಕು ಎಂಬ ಆಧಾರದಲ್ಲಿ ದೇಶದಲ್ಲಿ ಕೋಮು ಗಲಭೆಗಳು ನಡೆಯುತ್ತಿವೆ.
ಒಂದು ಗುಂಪಿನ ನಾಗರಿಕರನ್ನು ದೇಶದ ಶತ್ರುಗಳು ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಪ್ರತಿಯೊಬ್ಬರೂ, ಆತನ/ ಆಕೆಯ ಧರ್ಮ, ಜಾತಿ ಅಥವಾ ಮತ ಯಾವುದೇ ಇರಲಿ, ಕಾನೂನಿನ ಅಡಿಯಲ್ಲಿ ಸಮಾನ ರಕ್ಷಣೆಯ ಅರ್ಹತೆ ಹೊಂದಿರುತ್ತಾರೆ. ಆದರೆ ದೇಶದಲ್ಲಿ ಇದನ್ನು ಬದಲಿಸಲಾಗುತ್ತಿದೆ ಎಂದು ಕೇರಳ ಸಿಎಂ ಪಿಣರಾಯಿ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.