ಬೆಂಗಳೂರು:- ಬನ್ನೇರುಘಟ್ಟದಲ್ಲಿ ದೇಶದ ಅತಿದೊಡ್ಡ ಚಿರತೆ ಸಫಾರಿ ಶೀಘ್ರ ಆರಂಭವಾಗಲಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಸಿಂಹ ಮತ್ತು ಹುಲಿ ಸಫಾರಿ ಮಾದರಿಯಲ್ಲಿ ಚಿರತೆ ಸಫಾರಿಯನ್ನು ಶೀಘ್ರ ಆರಂಭಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆ ಮತ್ತು ಮೃಗಾಲಯ ನಿರ್ವಹಣಾ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ ಚಿರತೆ ಸಫಾರಿ ಶೀಘ್ರ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ.
ಯಾವಾಗಿನಿಂದ ಆರಂಭ?
ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಒಂದೂವರೆ ತಿಂಗಳಲ್ಲಿ ಸಫಾರಿಯನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿಸಬಹುದು. ಆದರೆ, ಲೋಕಸಭೆ ಚುನಾವಣೆಯ ಕಾರಣ ಮಾದರಿ ನೀತಿ ಸಂಹಿತೆ ಜಾರಿಗೆ ಬಂದರೆ ಮೇ ನಂತರವಷ್ಟೇ ಸಫಾರಿಯನ್ನು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿಸಬಹುದು ಎಂದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೇರೆ ಬೇರೆ ಕಡೆಯಿಂದ ತಂದಿರುವ ಚಿರತೆಗಳು ಇರುವ ಕಾರಣ ಸಹಬಾಳ್ವೆ ಬಗ್ಗೆ ಅವುಗಳಿಗೆ ತರಬೇತಿ ನೀಡುವ ಅಗತ್ಯವಿದೆ. ಅವುಗಳ ನಡುವೆ ಹೊಂದಾಣಿಕೆ ಮೂಡಿಸಬೇಕಿದೆ. ದಕ್ಷಿಣ ಆಫ್ರಿಕಾದಿಂದ ಮಧ್ಯಪ್ರದೇಶದ ಕುನೋ ರಕ್ಷಿತಾರಣ್ಯಕ್ಕೆ ತರಲಾದ ಚಿರತೆಗಳ ವಿಷಯದಲ್ಲಿ ಅವುಗಳು ಸಹಬಾಳ್ವೆ ನಡೆಸದೆ ಸಮಸ್ಯೆಯಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಕಾರ್ಯಪ್ರವೃತ್ತರಾಗಬೇಕಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಚಿರತೆ ಸಫಾರಿಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರದೇಶದಲ್ಲಿ 20 ಹೆಕ್ಟೇರ್ಗಳನ್ನು ಗುರುತಿಸಲಾಗಿದೆ. ಚಿರತೆಗಳು ತಪ್ಪಿಸಿಕೊಳ್ಳಲು ಅವಕಾಶ ಆಗದಂತೆ ಎತ್ತರದ ಮೆಶ್ ಅನ್ನು ಹಾಕಲಾಗಿದ್ದು, ಬೇಲಿಗಳನ್ನೂ ಹಾಕಲಾಗಿದೆ.
ಮೃಗಾಲಯದ ಅಧಿಕಾರಿಗಳು ನಿರ್ವಹಿಸುವ ಚಿರತೆ ಸಫಾರಿಗಳು ಈಗಾಗಲೇ ಮಹಾರಾಷ್ಟ್ರದ ನಾಗ್ಪುರ ಮತ್ತು ಬಿಹಾರದ ರಾಜ್ಗಿರ್ನಲ್ಲಿ ತೆರೆದಿವೆ. ಆದರೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಸಫಾರಿ ಅವುಗಳಿಗಿಂತ ದೊಡ್ಡದಾಗಿರಲಿದೆ.