ವಾಷಿಂಗ್ ಟನ್: ಪೋಷಕರು 18 ತಿಂಗಳ ಮಗುವನ್ನು ಕಾರಿನಲ್ಲೇ ಬಿಟ್ಟು ಹೋದ ಪರಿಣಾಮ ಉಸಿರುಗಟ್ಟೆ ಮಗು ಮೃತಪಟ್ಟಿರುವ ಘಟನೆ ಅಮೇರಿಕಾದಲ್ಲಿ ನಡೆದಿದೆ.
ಸಿಎನ್ಎನ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ರಾತ್ರಿ ಇಡೀ ಮಗುವನ್ನು ಉಷ್ಣಾಂಶ ಹೆಚ್ಚಿರುವ ಕಾರಿನಲ್ಲಿ ಪೋಷಕರು ಬಿಟ್ಟಿದ್ದಾರೆ. ಬೆಳಿಗ್ಗೆ 3 ಗಂಟೆಯಿಂದ 11 ಗಂಟೆ ವರೆಗೆ ಮಗು 105 ಡಿಗ್ರಿ ಉಷ್ಣಾಂಶದಲ್ಲಿತ್ತು ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೋಯಲ್ ಹಾಗೂ ಜಾಜ್ಮೈನ್ ರಾಂಡನ್ ದಂಪತಿ 9 ವರ್ಷಗಳಿಗಿಂತ ಕಿರಿಯವರಾದ ತಮ್ಮ ಮೂವರು ಮಕ್ಕಳೊಂದಿಗೆ ಜುಲೈ ನಾಲ್ಕರಂದು ಮನೆಯಿಂದ ಹೊರಗೆ ಪಾರ್ಟಿಗೆ ತೆರಳಿದ್ದರು. ಮನೆಗೆ ವಾಪಸ್ಸಾದ ಬಳಿಕ ಮಕ್ಕಳನ್ನು ಕರೆತರಲು ಜಾಜ್ಮೈನ್ ಪತಿಗೆ ಹೇಳಿದ್ದಾರೆ. ಈ ವೇಳೆ ಜೋಯಲ್ ಹೊರ ಹೋದಾಗ ಕಾರಿನ ಬಾಗಿಲು ತೆರೆದಿತ್ತು. ಪಾರ್ಟಿಗೆ ತೆಗೆದುಕೊಂಡು ಹೋಗಿದ್ದ ಟ್ರೇ, ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋದರು. ಮರಳಿ ವಾಪಸ್ಸಾದಾಗ ಕಾರಿನ ನಾಲ್ಕೂ ಬಾಗಿಲು ಬಂದ್ ಆಗಿತ್ತು.
ಇದನ್ನು ಗಮನಿಸಿದ ಪತಿ ಜೋಯಲ್ ಕಾರಿನಲ್ಲಿದ್ದ ಮಗುವನ್ನು ಪತ್ನಿ ಅದಾಗಲೇ ಮನೆಗೆ ಕರೆದೊಯ್ದಿದ್ದಾಳೆ ಎಂದು ಭಾವಿಸಿ ಮನೆಗೆ ವಾಪಸ್ಸಾಗಿದ್ದಾನೆ. ಆದರೆ ಪತಿ-ಪತ್ನಿ ಇಬ್ಬರೂ ಕಾರಿನಲ್ಲಿದ್ದ ಮಗು ಮನೆಯಲ್ಲಿದೆ ಎಂದು ಭಾವಿಸಿ ರಾತ್ರಿ ನಿದ್ರಿಸಿದ್ದಾರೆ. ಮರು ದಿನ ಎದ್ದಾಗ ಮನೆಯಲ್ಲಿ ಮಗು ಕಾಣಿಸಲಿಲ್ಲ. ಆತಂಕಗೊಂಡ ತಂದೆ ಬಿಸಿಲಿನಲ್ಲಿ ನಿಂತಿದ್ದ ಕಾರಿನಲ್ಲೇ ಇದ್ದ ಮಗು ಹಾಗೆಯೇ ಮಲಗಿರುವುದನ್ನು ಕಂಡಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗೆ ಮಗು ಸಾವನ್ನಪ್ಪಿತ್ತು.
ಘಟನೆ ನಡೆದ ದಿನ ತಾಪಮಾನ ಅಧಿಕವಾಗಿತ್ತು. ಮಗುವಿನ ದೇಹದ ತಾಪಮಾನ 104 ಡಿಗ್ರಿ ಫ್ಯಾರನ್ ಹೀಟ್ ನಷ್ಟಿತ್ತು, ಅತ್ಯಧಿಕ ತಾಪಮಾನದ ಕಾರಣದಿಂದ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದು, ಪೋಷಕರ ವಿರುದ್ಧ ಹತ್ಯೆ ಪ್ರಕರಣ ದಾಖಲಾಗಿದೆ.