ಬೆಂಗಳೂರು: ವಧು ಹುಡುಕಿಕೊಡದ ಮ್ಯಾಟ್ರಿಮೋನಿ ಪೋರ್ಟಲ್ಗೆ 60 ಸಾವಿರ ದಂಡವನ್ನು ಕೋರ್ಟ್ ವಿಧಿಸಿದೆ. ಗ್ರಾಹಕರ ನ್ಯಾಯಾಲಯ ಈ ದಂಡವನ್ನು ವಿಧಿಸಿದೆ.
ಬೆಂಗಳೂರಿನ ಎಂಎಸ್ ನಗರ ನಿವಾಸಿ ಕೆಎಸ್ ವಿಜಯಕುಮಾರ್ ಅವರು ತಮ್ಮ ಮಗ ಬಾಲಾಜಿಗೆ ಕನ್ಯೆ ಹುಡುಕುತ್ತಿದ್ದರು.
ಅದರಂತೆ, ವಿಜಯಕುಮಾರ್ ಅವರು ಕಲ್ಯಾಣ ನಗರದಲ್ಲಿರುವ ದಿಲ್ ಮಿಲ್ ಮ್ಯಾಟ್ರಿಮೋನಿಗೆ ಭೇಟಿ ನೀಡಿದ್ದರು. ಈ ವೇಳೆ ಸಂಸ್ಥೆ ಬಾಲಾಜಿಗೆ 45 ದಿನಗಳಲ್ಲಿ ವಧು ಹುಡುಕುವುದಾಗಿ ಭರವಸೆ ನೀಡಿತ್ತು. ಬಳಿಕ, ಕೆಸ್ ವಿಜಯಕುಮಾರ್ ಅವರು ಮಾರ್ಚ್ 17 ರಂದು ಸಂಸ್ಥಗೆ ತಮ್ಮ ಮಗನ ಮಗನ ಭಾವಚಿತ್ರ ಮತ್ತು ಅಗತ್ಯ ದಾಖಲೆಗಳನ್ನು ನೀಡಿದ್ದರು. ಜೊತೆಗೆ 30 ಸಾವಿರ ರೂ. ಶುಲ್ಕ ಪಾವತಿಸಿದ್ದರು. 45 ದಿನಗಳು ಕಳೆದರೂ ಸಂಸ್ಥೆ ವಧು ಹುಡುಕಿಕೊಡುವಲ್ಲಿ ವಿಫಲವಾಯಿತು. ಆಗ, ವಿಜಯಕುಮಾರ್ ಅವರು ಹಣ ಮರಳಿಸುವಂತೆ ಹೇಳಿದರು. ಆದರೆ, ಸಂಸ್ಥೆ ಮಾತ್ರ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ.
ಹೀಗಾಗಿ, ವಿಜಯಕುಮಾರ್ ಅವರು ಮಾರ್ಚ್ 30 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಆಗ, ಸಂಸ್ಥೆ ಏಪ್ರಿಲ್ 30ರವರೆಗೆ ಕಾಯುವಂತೆ ಮನವಿ ಮಾಡಿಕೊಂಡಿತು. ಒಂದು ತಿಂಗಳು ಕಾಯುತ್ತಿದ್ದರೂ ದಿಲ್ ಮಿಲ್ ಮ್ಯಾಟ್ರಿಮೋನಿ ಸಂಸ್ಥೆಯಿಂದ ಪ್ರತಿಕ್ರಿಯೆ ಬಂರಲಿಲ್ಲ. ಹೀಗಾಗಿ, ವಿಜಯಕುಮಾರ್ ಅವರು ಮತ್ತೊಮ್ಮೆ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿನ ಸಿಬ್ಬಂದಿ ನಿಂದಿಸಿ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ.
ನಂತರ, ವಿಜಯಕುಮಾರ್ ಅವರು ಮೇ5 ರಂದು ಸಂಸ್ಥೆಗೆ ಲೀಗಲ್ ನೋಟಿಸ್ ನೀಡಿದರು. ಇದಕ್ಕೆ ಸಂಸ್ಥೆ ಯಾವುದೇ ಉತ್ತರ ನೀಡಲಿಲ್ಲ. ಹೀಗಾಗಿ, ವಿಜಯಕುಮಾರ್ ಅವರು ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ವಿಜಯಕುಮಾರ್ ಅವರ ಆರೋಪಕ್ಕೆ ದಿಲ್ ಮಿಲ್ ಸಂಸ್ಥೆ ಯಾವುದೇ ಉತ್ತರ ನೀಡಲಿಲ್ಲ
ಬೆಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷ ಎಂಎಸ್ ರಾಮಚಂದ್ರ ಅವರು ವಿಚಾರಣೆ ವೇಳೆ, ದೂರುದಾರರಿಗೆ ಸೇವೆ ಸಲ್ಲಿಸುವ ವೇಳೆ ಸ್ಪಷ್ಟವಾದ ಕೊರತೆ ಕಂಡು ಬಂದಿದೆ. ಇದು ಅನ್ಯಾಯದ ವ್ಯಾಪಾರದ ಅಭ್ಯಾಸಗಳಲ್ಲಿ ತೊಡಗಿದೆ ಎಂದು ಹೇಳಬಹುದು. ಹೀಗಾಗಿ ದೂರುದಾರರು ಸಂಸ್ಥೆಗೆ ನೀಡಲಾದ ಶಲ್ಕದೊಂದಿಗೆ ಪರಿಹಾರ ಮೊತ್ತವನ್ನೂ ನೀಡಬೇಕೆಂದು ಆದೇಶಿಸಿದರು.