ರಾಮನಗರ:- ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅವರ ಗೆಲುವಿಗೆ ಸಹಾಯ ಮಾಡಿದ್ದೆ ಎಂದು ಯೋಗೇಶ್ವರ್ ಅವರೇ ಬಾಯಿಬಿಟ್ಟಿದ್ದಾರೆ.
ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಹೆಚ್ಚು ಆರೋಪ ಮಾಡಿದವರ ಪೈಕಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಂಚೂಣಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮಾತನಾಡಿದ್ದ ಯತ್ನಾಳ್, ಯಾವುದೇ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಸೋಲು ಖಚಿತ ಎಂದು ಹೇಳಿದ್ದರು. ಆ ಮೂಲಕ ಪರೋಕ್ಷವಾಗಿ ಬಿಜೆಪಿಯಲ್ಲಿನ ಕೆಲವು ನಾಯಕರಿಗೆ ಟಾಂಗ್ ಕೊಟ್ಟಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲು ವಿಜಯೇಂದ್ರ ಅವರು ಹಣ ಕಳುಹಿಸಿದ್ದರು. ಯಡಿಯೂರಪ್ಪ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಅಡ್ಜೆಸ್ಟ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಯತ್ನಾಳ್ ಅವರು ಪಂಚಮಸಾಲಿ ಸಮುದಾಯದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮುಂದೆ ಹೇಳಿಕೊಂಡಿದ್ದರು. ನಿನ್ನೆಯಷ್ಟೇ ಮಾತನಾಡಿದ್ದ ಶಿವಮೊಗ್ಗ ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಅವರು ಶಿಕಾರಿಪುರದಲ್ಲಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡು ವಿಜಯೇಂದ್ರ ಅವರು ಗೆದ್ದಿದ್ದಾರೆ ಆರೋಪಿಸಿದ್ದರು. ಈ ಎಲ್ಲಾ ಬೆಳವಣಿಗಳ ನಡುವೆ ತಾನು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಜೊತೆ ಹೊಂದಾಣಿಕೆ ಮಾಡಿಕೊಂಡ ಬಗ್ಗೆ ಯೋಗೇಶ್ವರ್ ಹೇಳಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.