ಬೆಂಗಳೂರು: ಹೆಚ್ಚು ಭಕ್ತಾದಿಗಳು ಬರುವ ರಾಜ್ಯದ ದೇವಾಲಯಗಳ ಅಭಿವೃದ್ಧಿಗಾಗಿ ದೇವಾಲಯಗಳಿಗೆ ಪ್ರಾಧಿಕಾರ ರಚನೆ ಮಾಡುವುದಾಗಿ ಮುಜರಾಯಿ ಸಚಿವರ ರಾಮಲಿಂಗಾ ರೆಡ್ಡಿ ಘೋಷಣೆ ಮಾಡಿದರು.
ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ನ ರವಿ ಬದಲಿಗೆ ಯುಬಿ ವೆಂಕಟೇಶ್ ಘಾಟಿ ಸುಬ್ರಹ್ಮಣ್ಯ ದೇವಾಲಯದ ಅಭಿವೃದ್ಧಿ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಸಚಿವರು, ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತದೆ. ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರಾಧಿಕಾರ ನಿರ್ಮಾಣ ಮಾಡುತ್ತೇವೆ. ಪಾರ್ಕಿಂಗ್ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಪಾರ್ಕಿಂಗ್ ಅಗತ್ಯ ಸ್ಥಳ ಗುರುತಿಸಲಾಗಿದೆ. ದೇವಾಲಯಕ್ಕೆ 10 ಕೋಟಿ ರೂ. ವಾರ್ಷಿಕ ಆದಾಯ ಬರುತ್ತದೆ. ಹಣದ ಕೊರತೆ ಇಲ್ಲ. ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತೇವೆ ಜೊತೆಗೆ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರಾಧಿಕಾರ ಮಾಡುತ್ತೇವೆ ಎಂದರು.
ಇದೇ ವೇಳೆ ಮಾತನಾಡಿದ ಸಚಿವರು, ಹೆಚ್ಚು ಭಕ್ತರು ಬರುವ ಎಲ್ಲಾ ದೇವಾಲಯಗಳಿಗೆ ವಿಶೇಷ ಪ್ರಾಧಿಕಾರ ರಚನೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಈ ವಿಚಾರ ಮುಂದಿನ ಕ್ಯಾಬಿನೆಟ್ ಮುಂದೆ ಬರಲಿದೆ. ಕ್ಯಾಬಿನೆಟ್ ನಲ್ಲಿ ದೇವಾಲಯಗಳ ಅಭಿವೃದ್ಧಿಗೆ ಪ್ರಾಧಿಕಾರ ರಚನೆಗೆ ಒಪ್ಪಿಗೆ ಕೊಡುತ್ತೇವೆ. ಪ್ರಾಧಿಕಾರದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಶಾಸಕರು ಇರಲಿದ್ದು, ದೇವಾಲಯಗಳ ಅಭಿವೃದ್ಧಿಗೆ ಪ್ರಾಧಿಕಾರಗಳು ಅನುಕೂಲ ಆಗಲಿವೆ ಎಂದರು